

ಸಿದ್ದಾಪುರ: ನಿರಂತರವಾಗಿ ವಾಹನ ಓಡಾಡುವ ಗೋಳಿಮಕ್ಕಿ-ಹೇರೂರು-ಶಿರಸಿ ಮುಖ್ಯ ರಸ್ತೆಯ ಕಾರಗುಳಿ-ಹೆಗ್ನೂರು ಬಸ್ ನಿಲ್ದಾಣದ ನಡುವೆ ಕಳೆದ ಮಳೆಗಾಲದಲ್ಲಿಯೇ ಧರೆ ಕುಸಿದು ರಸ್ತೆಯವರೆಗೆ ಒಂದು ಕಲ್ಲಿನ ಬಂಡೆ ಬಂದು ಬಿದ್ದಿದ್ದನ್ನು ತೆರವುಗೊಳಿಸದೇ ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ನಿತ್ಯ ಸಾರಿಗೆ ಬಸ್ ಸೇರಿ ಸಾವಿರಾರು ವಾಹನಗಳು ಸಂಚರಿಸುವ ಈ ಮಾರ್ಗ ಇಕ್ಕಟ್ಟಿನಿಂದ ಕೂಡಿದೆ. ಅದರಲ್ಲಿಯೂ ರಸ್ತೆ ಪಕ್ಕದ ಧರೆ ಕುಸಿದು ಒಂದು ಕಲ್ಲಿನ ಬಂಡೆ ಬಿದ್ದಿದ್ದು ಒಂದೆಡೆಯಾದರೆ, ಅದರ ಎದುರಿನಲ್ಲಿಯೇ ಇರುವ ಅಡಕೆ ತೋಟದ ಧರೆಯೂ ಕುಸಿದಿದೆ. ಇದರಿಂದ ಇಲ್ಲಿ ವಾಹನ ಸವಾರರು ಎಚ್ಚರ ತಪ್ಪಿದರೆ ಅನಾಹುತ ಸಂಭವಿಸುವುದು ಗ್ಯಾರಂಟಿ.
ಇಲ್ಲಿ ನಿತ್ಯ ಸಂಚಾರ ಮಾಡುವ ವಾಹನ ಸವಾರರು ಎಚ್ಚರದಿಂದಲೇ ಓಡಾಡುತ್ತಿದ್ದಾರೆ. ಆದರೆ, ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ತನಗೆ ಇದು ಸಂಬಂಧ ಇಲ್ಲದಂತೆ ಕಣ್ಮುಚ್ಚಿ ಕುಳಿತಂತೆ ಕಂಡುಬರುತ್ತಿದೆ ಎಂದು ಗೋಳಿಮಕ್ಕಿ, ಹೆಗ್ನೂರು, ಕಾರಗುಳಿ, ಹೇರೂರು, ಕಿಬ್ಬಳ್ಳಿ ಸುತ್ತಮುತ್ತಲಿನ ವಾಹನ ಸವಾರರು ಹಾಗೂ ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.
ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಳೆಗಾಲದಲ್ಲಿ ಧರೆ ಕುಸಿದಾಗಲೇ ನೋಡಿಕೊಂಡು ಹೋಗಿದ್ದಾರೆ. ಇಂದಿನವರೆಗೂ ಅದನ್ನು ತೆರವುಗೊಳಿಸಬೇಕು ಎಂದು ನೋಡಿಲ್ಲ. ಅಲ್ಲದೆ, ಡಾಂಬರು ರಸ್ತೆಗೆ ತಾಗಿಯೇ ರಸ್ತೆ ಪಕ್ಕದಲ್ಲಿ ಕೊರಕಲು ಬಿದ್ದಿದ್ದು, ಇದರಿಂದಲೂ ವಾಹನ ಓಡಿಸುವುದಕ್ಕೆ ಆಗುತ್ತಿಲ್ಲ. ಒಮ್ಮೆ ಎಲ್ಲಾದರೂ ಡಾಂಬರು ರಸ್ತೆಯಿಂದ ವಾಹನ ಕೆಳಗಿಳಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದೇ ರಸ್ತೆಯಲ್ಲಿ ಇಲಾಖೆ ಅಧಿಕಾರಿಗಳು ಓಡಾಡುತ್ತಿದ್ದರೂ ಇವುಗಳನ್ನೆಲ್ಲ ಕಂಡು ಕಾಣದಂತೆ ಇದ್ದಾರೆ. ಮಳೆಗಾಲ ಬರುವದೊಳಗಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಲ್ಲುಬಂಡೆ ಹಾಗೂ ಕುಸಿದ ಧರೆಯ ಮಣ್ಣನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.