ರೈತರ ಪಹಣಿ ಪತ್ರಿಕೆಯಲ್ಲಿ ‘ಸರ್ಕಾರ’ ತೆಗೆಯಲು ಒತ್ತಾಯ

Hanagal Janaspandana Meeting
Published on

ಹಾನಗಲ್ಲ: ರೈತರ ಪಹಣಿ ಪತ್ರಿಕೆಯಲ್ಲಿ ಸರ್ಕಾರ ಎಂದು ದಾಖಲಾಗಿದ್ದು, ಅದನ್ನು ತೆಗೆದು ಹಾಕಬೇಕು. ತಾಲೂಕಿನ ನೂರಾರು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ... ಹೀಗೆ ಹಲವು ದೂರುಗಳಿಗೆ ತಾಲೂಕು ಮಟ್ಟದ ಜನಸ್ಪಂದನ ಸಭೆ ಸಾಕ್ಷಿಯಾಯಿತು.

ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ದಾನಮ್ಮನವರ ಅಧ್ಯಕ್ಷತೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಶಾಸಕರು, ಅಧಿಕಾರಿಗಳೆದುರು ಗ್ರಾಮಸ್ಥರು ಸಮಸ್ಯೆಗಳನ್ನು ಬಿಚ್ಚಿಟ್ಟರು.

ರಾಮತೀರ್ಥ ಗ್ರಾಮದಲ್ಲಿ ಫಲಾನುಭವಿಗಳಿಗೆ ನೀಡಿದ್ದ ನಿವೇಶನ ಪಟ್ಟಾಗಳು ರದ್ದಾಗಿವೆ. ನರೇಗಾದಡಿ ರಸ್ತೆ ನಿರ್ವಣಕ್ಕೆ ಎದುರಾಗಿರುವ ಅಡ್ಡಿ ನಿವಾರಿಸಬೇಕು ಎಂದು ಮನವಿ ಮಾಡಿದರು.

ಕಂದಾಯ ಇಲಾಖೆ ಅಧಿಕಾರಿಗಳು ಹಿಂದೊಮ್ಮೆ ಮಾಡಿದ ತಪ್ಪಿನಿಂದಾಗಿಯೇ ಸಾವಿರಾರು ಪಹಣಿ ಪತ್ರಿಕೆಗಳಲ್ಲಿ ಸರ್ಕಾರ ಎಂದು ನಮೂದಾಗಿದೆ. ಇದರಿಂದಾಗಿ ರೈತರಿಗೆ ಸರ್ಕಾರದ ಯೋಜನೆಗಳ ಲಾಭ ದೊರಕದಂತಾಗಿದೆ. ಇದನ್ನು ತೆಗೆದುಹಾಕಲು ರೈತರು ಬಹಳಷ್ಟು ದಾಖಲಾತಿ ಪೂರೈಸಬೇಕಾಗಿದೆ ಎಂದು ರೈತ ಮುಖಂಡ ಸದಾನಂದಗೌಡ ಪಾಟೀಲ ಮನವಿ ಮಾಡಿದರು.

ಪ್ರತಿಕ್ರಿಯಿಸಿದ ಡಿಸಿ ಮಹಾಂತೇಶ ದಾನಮ್ಮನವರ, ಈಗಾಗಲೇ 700 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇನ್ನೂ 800 ಪ್ರಕರಣಗಳು ಬಾಕಿ ಉಳಿದಿವೆ. ಅವುಗಳನ್ನೂ ಶೀಘ್ರ ಬಗೆಹರಿಸುವುದಾಗಿ ಭರವಸೆ ನೀಡಿದರು.

ರಾಮತೀರ್ಥದ 9 ಎಕರೆಯಲ್ಲಿ ನಿವೇಶನ ರಚಿಸಿ ಅದರ ಪಟ್ಟಾಗಳನ್ನು 244 ಫಲಾನುಭವಿಗಳಿಗೆ ವಿತರಿಸಲಾಗಿತ್ತು. ಆದರೆ, ಇತ್ತೀಚೆಗೆ ಪಟ್ಟಾಗಳನ್ನು ರದ್ದುಪಡಿಸಲಾಗಿದೆ. ಮರುಪರಿಶೀಲಿಸಿ ಅರ್ಹರಿಗೆ ನ್ಯಾಯ ಒದಗಿಸಬೇಕು. ಹುಡಾ ಗ್ರಾಮದಲ್ಲಿ ನರೇಗಾದಡಿ ರಸ್ತೆ ನಿರ್ವಣಕ್ಕೆ ಕೆಲವರು ಅಡ್ಡಿಪಡಿಸಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಅಕ್ರಮ ಮದ್ಯ ಮಾರಾಟ

ತಾಲೂಕಿನ 100ಕ್ಕೂ ಅಧಿಕ ಗ್ರಾಮಗಳ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದನ್ನು ಸಾಕ್ಷಿ ಸಹಿತವಾಗಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಡಿಸಿ ಗಮನ ಸೆಳೆದರು. ಅಕ್ರಮ ಮದ್ಯ ಮಾರಾಟದಿಂದಾಗಿ ನೂರಾರು ಕುಟುಂಬಗಳು ಬೀದಿ ಪಾಲಾಗುತ್ತಿವೆ. ಹಾನಗಲ್ಲಿನಿಂದ ಬೈಕ್​ಗಳಲ್ಲಿ ಸಾಗಿಸಲಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಮಹಿಳೆಯರು ಆಗ್ರಹಿಸಿದರು.

2ಎ ಪ್ರಮಾಣ ಪತ್ರಕ್ಕೆ ಮನವಿ

ಕುಂಬಾರ ಸಮುದಾಯಕ್ಕೆ 2ಎ ಪ್ರಮಾಣಪತ್ರ ನೀಡಬೇಕು ಎಂದು ಕುಂಬಾರ ಸಮುದಾಯದ ತಾಲೂಕು ಅಧ್ಯಕ್ಷ ಮಹೇಶ ಮತ್ತಿಹಳ್ಳಿ ಮತ್ತಿತರರು ಮನವಿ ಸಲ್ಲಿಸಿದರು. ಸ್ಪಂದಿಸಿದ ಡಿಸಿ ಮಹಾಂತೇಶ, ಸ್ಥಳೀಯವಾಗಿ ಮನೆಗಳಿಗೆ ತೆರಳಿ ಪೂರ್ವಜರ ದಾಖಲೆ ಪರಿಶೀಲಿಸಿ, ಪ್ರಮಾಣಪತ್ರ ವಿತರಿಸುವಂತೆ ತಹಸೀಲ್ದಾರ್ ಎಸ್.ರೇಣುಕಾ ಅವರಿಗೆ ಸೂಚಿಸಿದರು.

ಜಿಪಂ ಸಿಇಒ ಅಕ್ಷಯ ಶ್ರೀಧರ, ಉಪ ಕಾರ್ಯದರ್ಶಿ ಡಾ. ಎಸ್. ರಂಗಸ್ವಾಮಿ, ಎಡಿಸಿ ವೀರಮಲ್ಲಪ್ಪ ಪೂಜಾರ, ಸವಣೂರು ಉಪ ವಿಭಾಗಾಕಾರಿ ಮಹ್ಮದ್ ಖಿಜರ್, ತಹಸೀಲ್ದಾರ್ ಎಸ್. ರೇಣುಕಾ, ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮಾಳಾಪುರ, ಉಪಾಧ್ಯಕ್ಷೆ ನನ್ನಿಮಾ ನಾಸಿಪುಡಿ, ಅಧಿಕಾರಿಗಳು ಇದ್ದರು.

ಜನರ ಅಪೇಕ್ಷೆಗೆ ತಕ್ಕಂತೆ ತಾಲೂಕಿನ ಆಡಳಿತ ವ್ಯವಸ್ಥೆ ಚುರುಕುಗೊಳಿಸಲಾಗಿದೆ. 50 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಲಾಗುತ್ತಿದೆ. ಕಂದಾಯ ದಾಖಲೆಗಳ ಡಿಜಿಟಲೀಕರಣ ನಡೆದಿದ್ದು, ಈಗಾಗಲೇ 22 ಲಕ್ಷ ದಾಖಲೆಗಳನ್ನು ಅಪ್​ಲೋಡ್ ಮಾಡಲಾಗಿದೆ. | ಶ್ರೀನಿವಾಸ ಮಾನೆ ಶಾಸಕ

ಜನರನ್ನು ಅನವಶ್ಯಕವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸಬಾದರು. ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತಿಯಾಗಿರುವ ಎಲ್ಲ ಅರ್ಜಿಗಳನ್ನೂ ಗಣಕೀಕೃತಗೊಳಿಸಿ ವಿಲೇವಾರಿ ಮಾಡಲಾಗುವುದು. ಜಿಲ್ಲೆಯಲ್ಲಿ ನಡೆದ 11 ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 3,150 ಅರ್ಜಿ ಸ್ವೀಕರಿಸಿ ಪರಿಹಾರ ದೊರಕಿಸುವ ಯತ್ನ ಮಾಡಲಾಗಿದೆ. | ಡಾ. ವಿಜಯ ಮಹಾಂತೇಶ ದಾನಮ್ಮನವರ ಡಿಸಿ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net