ಬಳ್ಳಾರಿ : ನಗರಾದ್ಯಂತ ಶಾಸಕ ನಾರಾ ಭರತರೆಡ್ಡಿ ಹುಟ್ಟುಹಬ್ಬದ ಹಿನ್ನೆಲೆ ನಾನಾ ರಸ್ತೆ, ವೃತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಕೆಯ ಪರವಾನಗಿ ಪಡೆಯದೆ ಅಳವಡಿಸಿರುವ ಬ್ಯಾನರ್ ಹಾಗೂ ಕಟೌಟ್‌ಗಳನ್ನು ತೆರವುಗೊಳಿಸಬೇಕು ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ.ವೆಂಕಟರಮಣ ಆಗ್ರಹಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಅಳವಡಿಸಿರುವ ಬ್ಯಾನರ್‌ಗಳಿಗೆ ಅಧಿಕೃತ ಪರವಾನಗಿ ಪಡೆದಿರುವ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಆದ್ದರಿಂದ, ಎಲ್ಲ ಫ್ಲೆಕ್ಸ್ ಹಾಗೂ ಕಟೌಟ್‌ಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದರು.
ಕಳೆದ ಕೆಲ ತಿಂಗಳ ಹಿಂದೆ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ಕಟ್‌ಔಟ್ ಜಾಹೀರಾತುಗಳನ್ನು ಅಳವಡಿಸುವುದನ್ನು ನಿಷೇಧಿಸಲು ಸಭೆಯಲ್ಲಿ ಸರ್ವಾನುಮತದಿಂದ ಠರಾವು ಹೊರಡಿಸಲಾಗಿತ್ತು. ನಾನಾ ಕಡೆ ಬ್ಯಾನರ್‌ಗಳು ಅಳವಡಿಸಿ ಸ್ವತ ಶಾಸಕರೇ ಸಭೆಯ ಠರಾವು ಉಲ್ಲಂಘಸಿದ್ದು, ಕಾನೂನು ಹೋರಾಟಕ್ಕೆ ಹೋಗಲು ಚಿಂತಿಸಲಾಗುವುದು ಎಂದರು.
ಕೆಲ ದಿನಗಳ ಹಿಂದೆ ವಾಲ್ಮೀಕಿ ಜಯಂತಿ ಅಂಗವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ಪರವಾನಗಿ ಇಲ್ಲದ ಕಾರಣದಿಂದ ತೆರವುಗೊಳಿಸಿ ಪಾಲಿಕೆಯ ಅಧಿಕಾರಿ ಕ್ರಮಕ್ಕೆ ಒತ್ತಾಯಿಸಿ ಪತ್ರ ಬರೆದು, ಕೆಳ ದರ್ಜೆ ನೌಕರರನ್ನು ಅಮಾನತುಗೊಳಿಸಲಾಯಿತು. ಆದರೆ, ಈಗ ಕೆಲವರಿಗೆ ಮಾತ್ರ ವಿನಾಯಿತಿ ನೀಡಿದಂತಾಗಿದೆ ಎಂಬ ಅನುಮಾನ ನಾಗರಿಕರಲ್ಲಿ ಮೂಡುತ್ತಿದೆ ಎಂದರು.
ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಅನಧಿಕೃತ ಬ್ಯಾನರ್‌ಗಳು ತೆರವುಗೊಳಿಸಲು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಗುಡಿಗಂಟೆ ಹನುಮಂತು, ಮುಖಂಡರಾದ ಕೆ.ಮಲ್ಲೇಶ್, ಪುಷ್ಪಲಾತ ಇದ್ದರು.