ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲಿಸಲು ಆಗ್ರಹ

Vijayavani-Featured-Image
Published on

ಬೆಂಗಳೂರು: ಮುಡಾ ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಎಫ್​ಐಆರ್ ದಾಖಲಿಸಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಲೋಕಾಯುಕ್ತದ ಹೆಚ್ಚುವರಿ ನಿಬಂಧಕರಿಗೆ ಸೋಮವಾರ ಪತ್ರ ಬರೆದು ಮನವಿ ಮಾಡಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಿಎಂ ಪತ್ನಿ ಪಾರ್ವತಿ ಹೆಸರಿಗೆ 14 ಬದಲಿ ನಿವೇಶನಗಳನ್ನು ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಹಂಚಿಕೆ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ 60 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 408 ಪುಟಗಳ ದಾಖಲೆಗಳ ಸಹಿತ ದೂರನ್ನು ದಾಖಲಿಸಲಾಗಿದೆ. ಹೀಗಾಗಿ ರಾಜ್ಯಪಾಲರ ನಡೆ ಆಧರಿಸಿ ಸಿಎಂ ವಿರುದ್ಧ ತಕ್ಷಣವೇ ಎಫ್​​ಐಆರ್ ಹಾಕಬೇಕು ಎಂದು ಅವರು ಕೋರಿದ್ದಾರೆ.

ಸದರಿ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಸಿಎಂ ಸಿದ್ಧರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ, ಬಸವೇಗೌಡ, ಎಚ್.ವಿ.ರಾಜೀವ್, ಡಿ.ಬಿ. ನಟೇಶ್, ಮರಿಗೌಡ ಮತ್ತಿತರ ಭ್ರಷ್ಟ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ಸರ್ಕಾರಿ ಸ್ವತ್ತು ಕಬಳಿಕೆ ಸಂಚು ನಡೆಸಿರುವ ಪ್ರಕರಣಗಳಿಗೆ ಸಂಬಂಧಿಸಿ ಎಫ್​ಐಆರ್ ದಾಖಲಿಸಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಲೋಕಾಯುಕ್ತದ ಪೋಲೀಸ್ ಅಧೀಕ್ಷಕ ಹಾಗೂ ಹೆಚ್ಚುವರಿ ನಿಬಂಧಕರು (ವಿಚಾರಣೆಗಳು - 11) ಅವರಿಗೆ ಪತ್ರ ಬರೆದಿರುವುದಾಗಿ ಎನ್.ಆರ್.ರಮೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net