

ಗಣೇಶ್ ಕಮ್ಲಾಪುರ ದಾವಣಗೆರೆ
ಪ್ರಸ್ತುತ ಮುಂಗಾರಿಗೆ ರಿಯಾಯಿತಿ ದರದಲ್ಲಿ ಸರ್ಕಾರ ನೀಡುವ ಬಿತ್ತನೆ ಬೀಜಗಳ ದರದ ಭಾರಿ ಏರಿಕೆಯಿಂದ ಮೊದಲೇ ಬರದಿಂದ ಕಂಗೆಟ್ಟಿರುವ ರೈತ ಸಮುದಾಯಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.ಜಿಲ್ಲೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ (50 ಸಾವಿರ ಕ್ವಿಂ. ಅವಶ್ಯಕತೆ ಇದ್ದರೂ 75 ಸಾವಿರ ಕ್ವಿ. ಸಂಗ್ರಹ) ಬಿತ್ತನೆ ಬೀಜ ದಾಸ್ತಾನು ಇದ್ದರೂ ದರ ಹೆಚ್ಚಳದಿಂದ ರೈತರು ಖರೀದಿ ಕೇಂದ್ರದ ಕಡೆ ಮುಖ ಮಾಡುತ್ತಿಲ್ಲ.
ಪ್ರತಿ ಬಿತ್ತನೆ ಬೀಜಕ್ಕೆ ಶೇ.10 ರಿಂದ ಶೇ. 40ರಷ್ಟು ದರ ಹೆಚ್ಚಿಸಲಾಗಿದೆ. ಕಳೆದ ವರ್ಷ ಜಿಲ್ಲೆಯ ಅತಿ ಮುಖ್ಯ ಬೆಳೆಯಾದ ಮೆಕ್ಕೆಜೋಳ ಕೆಜಿಗೆ 109 ರೂ.ನಿಂದ 240 ರೂ. ಇತ್ತು. ಆದರೆ, ಈ ವರ್ಷ 115 ರೂ.ನಿಂದ 275 ರೂ.ಗೆ ಜಿಗಿದಿದೆ. ಇದೇ ರೀತಿ, ಕೆಲ ಬೀಜಗಳಿಗೆ ಶೇ. 60ರಷ್ಟು ದರ ದುಬಾರಿ ಮಾಡಲಾಗಿದೆ.
ಈಗಾಗಲೇ ಮುಂಗಾರು ಆರಂಭವಾಗಿದ್ದರೂ ಸರ್ಕಾರ ನಿಗದಿತ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮಾರಾಟ ಆರಂಭಿಸಿಲ್ಲವಾದ್ದರಿಂದ ಅನಿವಾರ್ಯವಾಗಿ ಕೆಲ ರೈತರು ಮತ್ತಷ್ಟು ಹೆಚ್ಚಿನ ದರ ನೀಡಿ ಇತರೆ ಬೀಜ ಕೇಂದ್ರಗಳಲ್ಲಿ ಖರೀದಿಸಿ ಬಿತ್ತನೆಯಲ್ಲಿ ತೊಡಗಿದ್ದಾರೆ.
ಪ್ರಮಾಣಿತವಾದ ಬಿತ್ತನೆ ಬೀಜದ ದರ ಹೆಚ್ಚಳ ಮಾಡಿರುವ ಸರ್ಕಾರ ಅದಕ್ಕೆ ತಕ್ಕಂತೆ ರೈತರಿಗೆ ನೀಡಬೇಕಾದ ಸಬ್ಸಿಡಿ ಮಾತ್ರ ಹೆಚ್ಚಳ ಮಾಡಿಲ್ಲ. ಕಳೆದ ವರ್ಷದ ಸಬ್ಸಿಡಿಯನ್ನೇ ಮುಂದುವರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ, ಬಹುತೇಕ ರೈತರಿಗೆ ಸಬ್ಸಿಡಿ ಪಡೆದುಕೊಳ್ಳುವ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಇದರಿಂದ ಈ ಬಾರಿ ರೈತರು ಬೀಜ ಖರೀದಿಗೂ ಸಾಲ ಮಾಡಬೇಕಾದ ಸ್ಥಿತಿ ಎದುರಾಗಿದೆ.
ಈ ಕುರಿತು ವಿಜಯವಾಣಿ ಸಂಗ್ರಹಿಸಿದ ಜನಾಭಿಪ್ರಾಯಗಳು ಇಲ್ಲಿವೆ.
ದರ ಹೆಚ್ಚಳದಂತೆ ಸಬ್ಸಿಡಿ ಹೆಚ್ಚಿಸಲಿ
ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಭರದಲ್ಲಿ ಜನಸಾಮಾನ್ಯರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಬಿತ್ತನೆ ಬೀಜಗಳ ದರ ಹೆಚ್ಚಳ ಮಾಡಿದಂತೆ ರೈತರಿಗೆ ನೀಡುವ ಸಬ್ಸಿಡಿಯನ್ನು ಹೆಚ್ಚಿಸಲಿ. ಅದನ್ನು ಬಿಟ್ಟು ಈ ರೀತಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಕಾರ್ಯ ಮಾಡುವುದು ಸರಿಯಲ್ಲ.
-ಲೋಕಿಕೆರೆ ನಾಗರಾಜ್, ಜಿಲ್ಲಾಧ್ಯಕ್ಷ, ಜಿಲ್ಲಾ ಬಿಜೆಪಿ ರೈತ ಮೋರ್ಚಾ, ದಾವಣಗೆರೆ.
ಬೆಳೆಗೂ ದರ ನಿಗದಿಪಡಿಸಲಿ
ಕಳೆದ ಮೂರು ವರ್ಷಗಳಿಂದ ಒಂದಿಲ್ಲೊಂದು ಕಾರಣದಿಂದ ರೈತಾಪಿ ವರ್ಗ ಯಾವ ಬೆಳೆಯನ್ನೂ ಪೂರ್ಣ ಪ್ರಮಾಣದಲ್ಲಿ ಬೆಳೆದಿಲ್ಲ. ಹೀಗಿರುವಾಗ, ಏಕಾಏಕಿ ದರ ಹೆಚ್ಚಳ ಸರಿಯಾದ ಕ್ರಮವಲ್ಲ. ಜತೆಗೆ, ಗೊಬ್ಬರದ ಬೆಲೆಯೂ ಗಗನಕ್ಕೇರಿದೆ. ಬಿತ್ತನೆ ಬೀಜಕ್ಕೆ ದರ ಹೆಚ್ಚಳ ಮಾಡಿದಂತೆ ರೈತರು ಬೆಳೆಯುವ ಬೆಳೆಗೂ ಸೂಕ್ತ ದರ ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಲಿ.
-ಯಶೋದಮ್ಮ
ಕೃಷಿ ಪಂಡಿತ ಪ್ರಶಸ್ತಿ ವಿಜೇತೆ, ಪ್ರಗತಿಪರ ರೈತ ಮಹಿಳೆ, ರಾಮೇಶ್ವರ.
ಸರ್ಕಾರದ ವಿರುದ್ಧ ಉಗ್ರ ಹೋರಾಟ
ಬರಗಾಲ ಪರಿಸ್ಥಿತಿಯಲ್ಲೂ ಸರ್ಕಾರ ಬಿತ್ತನೆ ಬೀಜದ ದರ ಹೆಚ್ಚಿಸಿ ಸರ್ಕಾರ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ಈ ಕೂಡಲೇ ದರ ಕಡಿಮೆಗೊಳಿಸಿ ವಿತರಿಸಿ, ರೈತರ ಹಿತ ಕಾಪಾಡಬೇಕು. ಇಲ್ಲದಿದ್ದರೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸುವರು.
-ಅಶೋಕ್ ಗೌಡ
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ, ಮಾಯಕೊಂಡ
ಚಿನ್ನ ಕೊಟ್ಟರೂ ಅನ್ನ ಸಿಗಲ್ಲ
ಇತ್ತೀಚಿನ ದಿನಗಳಲ್ಲಿ ಕೃಷಿ ಎಂದರೇ ಎಲ್ಲರೂ ದೂರ ಸರಿಯುತ್ತಿದ್ದಾರೆ. ಹೊಲಗದ್ದೆಗಳಲ್ಲಿ ಕೆಲಸಕ್ಕೆ ಬರುವವರೇ ಇಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ವಿನಾಕಾರಣ ಕೃಷಿ ಪರಿಕರಗಳ ಬೆಲೆ ಹೆಚ್ಚಿಸಿದರೆ ಎಲ್ಲರೂ ಕೃಷಿ ಕಾಯಕದಿಂದ ವಿಮುಖರಾಗುತ್ತಾರೆ. ಆಗ ಚಿನ್ನ ಕೊಟ್ಟರೂ ಒಂದು ತುತ್ತು ಅನ್ನ ಸಿಗದ ಪರಿಸ್ಥಿತಿ ಬರುತ್ತದೆ. ಜನಪ್ರತಿನಿಧಿಗಳಿಗೆ ಇದರ ಅರಿವಿರಲಿ.
-ಎಂ. ಚಂದ್ರಶೇಖರಪ್ಪ
ರೈತ ಮುಖಂಡ, ಕಮಲಾಪುರ. ಹರಿಹರ ತಾಲೂಕು
ಜನಪ್ರತಿನಿಧಿಗಳಿಗೆ, ಶ್ರೀಮಂತರಿಗೆ ರೈತನ ಕಷ್ಟದ ಅರಿವಿಲ್ಲ. ಅವರಿಗೆ ದಿನಸಿ ಬೆಲೆ ನೂರಾದರೂ ಸರಿ ಸಾವಿರ ರೂ. ಆದರೂ ಸರಿ ಖರೀದಿಸಲು ತೊಂದರೆಯಿಲ್ಲ. ಆದರೆ, ಮಧ್ಯಮ ವರ್ಗದವರಿಗೆ ದಿನಬಳಕೆ ವಸ್ತುಗಳ ಬೆಲೆ ಒಂದು ರೂ. ಹೆಚ್ಚಾದರೂ ಹತ್ತುಪಟ್ಟು ಯೋಚಿಸುವ ಸ್ಥಿತಿ ಇದೆ. ಅನ್ನ ಬೆಳೆಯುವ ಅನ್ನದಾತನಿಗೆ ಮೊದಲು ಬೆಲೆ ಕೊಡಿ.
ರಮೇಶ್ ಕಣ್ಣಾಳಾರ
ಗ್ರಾಪಂ ಸದಸ್ಯ, ಯಲವಟ್ಟಿ, ಹರಿಹರ ತಾಲೂಕು.
ಅನ್ನ ಬೆಳೆಯುವವರಿಗೆ ಮಿಡಿಯುವವರಿಲ್ಲ
ನಮ್ಮನ್ನಾಳುವ ಜನಪ್ರತಿನಿಧಿಗಳು ಪ್ರತಿ ಬಾರಿಯೂ ರೈತರಿಗೆ ಒಂದಿಲ್ಲೊಂದು ಸಮಸ್ಯೆ ಸೃಷ್ಟಿಸುತ್ತಲೇ ಇದ್ದಾರೆ. ಮಳೆ ಬಂದರೆ ಬೆಳೆಗೆ ಬೆಲೆ ಇಲ್ಲ, ಮಳೆ ಬರದಿದ್ದರೆ ಬೆಳೆಯೇ ಇಲ್ಲ. ಎರಡೂ ಇದ್ದರೆ ಮತ್ತೊಂದಿಲ್ಲವೆಂಬಂತೆ ರೈತರ ಜೀವನಕ್ಕೆ ಭದ್ರತೆಯೇ ಇಲ್ಲ. ಕೃಷಿಗಿಂತ ಮತ್ತೊಂದು ಶ್ರೇಷ್ಠ ಕಾಯಕವಿಲ್ಲ ಎನ್ನುತ್ತಾರೆ. ಆದರೆ, ರೈತನಿಗಾಗಿ ಮಿಡಿಯುವ ಯಾವ ಸರ್ಕಾರಗಳೂ ಬಂದಿಲ್ಲ.
-ಕುಮಾರ
ರೈತ ಮುಖಂಡ, ಭರಮಸಮುದ್ರ, ಜಗಳೂರು ತಾಲೂಕು.
ದರ ಹೆಚ್ಚಳಕ್ಕೆ ಬೀಜೋತ್ಪಾದನೆ ಕುಂಠಿತ ಕಾರಣ
ಕಳೆದ ವರ್ಷ ರಾಜ್ಯದಲ್ಲಿ ಬರಗಾಲದಿಂದಾಗಿ ಬೀಜೋತ್ಪಾದನೆಯಲ್ಲಿ ತೀವ್ರ ಕುಂಠಿತವಾದ ಪರಿಣಾಮ ಸಹಜವಾಗಿ ಬಿತ್ತನೆ ಬೀಜದ ದರ ಹೆಚ್ಚಳವಾಗಿದೆ. ಬೀಜ ನಿಗಮಗಳು ಉತ್ಪಾದಕರಿಂದ ಹೆಚ್ಚಿನ ದರ ಕೊಟ್ಟು ಖರೀದಿಸಿವೆ. ಹಾಗಾಗಿ, ದರ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ. ರೈತರು ಅಧಿಕೃತ ಮಳಿಗೆಯಿಂದ ಖರೀದಿಸಬೇಕು.
- ಶ್ರೀನಿವಾಸ್ ಚಿಂತಾಲ್
ಜಂಟಿ ಕೃಷಿ ನಿರ್ದೇಶಕರು, ದಾವಣಗೆರೆ.