

ಮುಂಡರಗಿ: ಪುರಸಭೆಯು ನಿರ್ಗತಿಕರಿಗೆ ಆಶ್ರಯ ಮನೆ ಹಂಚಿಕೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ, ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಬಳಿ ಸರ್ಕಾರದಿಂದ ನಿವೇಶನ ಖರೀದಿಸಿದ ಆಶ್ರಯ ಬಡಾವಣೆಯಲ್ಲಿ ನಿರ್ಮಿಸಲಾದ 1,008 ನಿವೇಶನಗಳ ಹಂಚಿಕೆ ಕುರಿತು ಈಗಾಗಲೇ ಆಶ್ರಯ ಕಮಿಟಿ ಠರಾವು ಮಾಡಿ 2022ರ ಆ.30ರಂದು ಒಟ್ಟು 994 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಆಯ್ಕೆ ಮಾಡಿರುವ ಫಲಾನುಭವಿಗಳ ಬಗ್ಗೆ ಮರು ಪರಿಶೀಲನೆ ನಡೆಯುತ್ತಿರುವಾಗ ಲೋಕಸಭಾ ಚುನಾವಣೆ ಬಂದಿದ್ದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ವಿಳಂಬವಾಯಿತು. ಈಗ ಅರ್ಹರನ್ನು ಗುರುತಿಸಿ ಫಲಾನುಭವಿಗಳಿಗೆ ಶೀಘ್ರವೇ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
ಮಂಜುನಾಥ ಹುಬ್ಬಳ್ಳಿ, ರಮೇಶ ರಾಮೇನಳ್ಳಿ, ರವಿ ಪಾಟೀಲ, ಶರಣಪ್ಪ ಹೊಂಬಳಗಟ್ಟಿ, ಮೈನುದ್ದೀನ ಗರಡಿಮನಿ, ಕೊಟ್ರೇಶ ದ್ಯಾಮಣ್ಣವರ, ದೇವಪ್ಪ ಕುಂಬಾರ ಇತರರು ಇದ್ದರು.