ಅಲೆಮಾರಿ ಶಿಳ್ಳೆಕ್ಯಾತ ಜನಾಂಗಕ್ಕೆ ಮೂಲಸೌಕರ್ಯ ಒದಗಿಸಲು ಆಗ್ರಹ

udp-shillekyata
Published on

ಉಡುಪಿ: ಸೂಕ್ಷ ಸಮುದಾಯಕ್ಕೆ ಸೇರಿರುವ ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳಿಗೆ ಉಚಿತ ಮನೆ ನಿವೇಶನ ಸಹಿತ ಸರ್ಕಾರದ ವಿವಿಧ ಸವಲತ್ತುಗಳನ್ನು ಜಿಲ್ಲಾಡಳಿತ ಒದಗಿಸಿಕೊಡಬೇಕು. ಯಾವುದೇ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ಸ್ಥಳಿಯರಿಂದ ಶೋಷಣೆಗೂ ಒಳಗಾಗುತ್ತಿದ್ದಾರೆ. ಗುರುತಿನ ಚೀಟಿ ಸಹಿತ ಯಾವುದೇ ದಾಖಲೆಗಳಿಲ್ಲದೆ ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ ಗೌರವ ಸಲಹೆಗಾರ ಸಂತೋಷ್​ ಬಜಾಲ್​ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಉಡುಪಿ, ಕಟಪಾಡಿ, ಮಲ್ಪೆ, ಪಾಂಗಾಳ, ಬ್ರಹ್ಮಾವರ, ಗುಲ್ವಾಡಿ, ಕಟ್​ ಬೆಳ್ಳೂರು ಭಾಗದ ನದಿ ತೀರಗಳಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯವೆಂದು ಘೋಷಿಸಲಾಗಿರುವ ಶಿಳ್ಳೆಕ್ಯಾತ ಜನಾಂಗದ ಸುಮಾರು 25 ಕುಟುಂಬಗಳು ಕಳೆದ ಹಲವು ವರ್ಷಗಳಿಂದ ತೆಪ್ಪಗಳ ಮೂಲಕ ನದಿಯಲ್ಲಿ ಬಲೆ ಬೀಸಿ ಮೀನು ಹಿಡಿದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸ್ಥಳಿಯರಿಂದ ಅನ್ಯರೆಂಬ ಅನುಮಾನಕ್ಕೂ ಅವಮಾನಕ್ಕೂ ಒಳಗಾಗಿ ದಿನನಿತ್ಯ ಕಿರುಕುಳ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ಗುಲ್ವಾಡಿ ಹೊಳೆ ಬದಿಯಲ್ಲಿ ಅಲೆಮಾರಿಗಳು ಬದುಕುವ ಗುಡಿಸಲಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದರೂ ಆರೋಪಿಗಳನ್ನು ಈವರೆಗೂ ಬಂಧಿಸಲಾಗಿಲ್ಲ ಎಂದು ಆರೋಪಿಸಿದರು.

ಬೇಡಿಕೆಗಳು
ಜಿಲ್ಲಾಡಳಿತವು ವಿವಿಧೆಡೆಗಳಲ್ಲಿ ಟೆಂಟ್​ಗಳಲ್ಲಿ ವಾಸಿಸುತ್ತಿರುವ ಶಿಳ್ಳೆಕ್ಯಾತ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನಲೆಯ ಸರ್ವೆ ನಡೆಸುವುದು. ಆರೋಗ್ಯ ಕಾರ್ಡು ಮತ್ತು ಇತರೆ ಗುರುತಿನ ಕಾರ್ಡುಗಳನ್ನು ವಿತರಿಸಬೇಕು. ಉಚಿತ ಮನೆ ನಿವೇಶನ ಹಾಗೂ ಪಡಿತರ ಚೀಟಿಗಳಿಗೆ ಕೂಡಲೇ ಆಹಾರ ಸಾಮಾಗ್ರಿಗಳನ್ನು ಒದಗಿಸಬೇಕು. ಡೆಂಗ್ಯೂ, ಮಲೇರಿಯಾದಂತಹ ರೋಗಗಳಿಂದ ತಪ್ಪಿಸಲು ಪ್ರತಿ ಟೆಂಟ್ಗಳಿಗೆ ಸೊಳ್ಳೆ ಪರದೆಗಳನ್ನು ವಿತರಿಸಬೇಕು. ಮಳೆ ಬಿಸಿಲಿನಿಂದ ರಕ್ಷಣೆ ಪಡೆಯಲು ಪ್ರತಿ ಕುಟುಂಬಗಳಿಗೂ 500 ಜಿಎಸ್​ಎಂ ರ್ಟಪಾಲ್​ ವಿತರಿಸಬೇಕು.

ಸಮಿತಿ ಗೌರವಾಧ್ಯಕ್ಷ ಕವಿರಾಜ್​ ಎಸ್​. ಕಾಂಚನ್​, ಜಿಲ್ಲಾ ಸಮಿತಿ ಅಧ್ಯಕ್ಷ ಶಂಕರ್​, ಕಾರ್ಯದರ್ಶಿ ರಾಮ, ವೆಂಕಟೇಶ್​, ಜಯಮಾಲಾ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net