ಕೂಡಲಸಂಗಮ ನಿಲ್ದಾಣದಲ್ಲಿ ಸೌಲಭ್ಯ ಕಲ್ಪಿಸಲು ಆಗ್ರಹ

Demand to provide facility at Kudal Sangama station
ಬಾಗಲಕೋಟೆ ತಾಲೂಕಿನ ರಾಂಪುರ ಬಳಿಯ ಕೂಡಲಸಂಗಮ ರೈಲು ನಿಲ್ದಾಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಸಂಜೀವಕುಮಾರ ಕಿಶೋರ ಅವರಿಗೆ ರಾಂಪುರ ಗ್ರಾಮಸ್ಥರು ಸೋಮವಾರ ಮನವಿ ಸಲ್ಲಿಸಿದರು.
Published on

ಕಮತಗಿ: ಬಾಗಲಕೋಟೆ ತಾಲೂಕಿನ ರಾಂಪುರ ಬಳಿಯ ಕೂಡಲಸಂಗಮ ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಿ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ ಸೇರಿ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ರಾಂಪುರ ಗ್ರಾಮಸ್ಥರು ಸೋಮವಾರ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಸಂಜೀವಕುಮಾರ ಕಿಶೋರ ಅವರಿಗೆ ಮನವಿ ಸಲ್ಲಿಸಿದರು.

ರೈಲ್ವೆ ಇಲಾಖೆಯ ಅಧಿಕಾರಿಗಳ ತಂಡ ಆಲಮಟ್ಟಿ ರೈಲು ನಿಲ್ದಾಣದ ಪರಿವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ರಾಂಪುರ ಸುತ್ತ ಮುತ್ತಲಿನ ಗ್ರಾಮಗಳ ಪ್ರಮುಖರು ಹಾಗೂ ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ಸಂಘಟನೆ ಪದಾಧಿಕಾರಿಗಳು ಸಂಜೀವಕುಮಾರ ಕಿಶೋರ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಅರ್ಪಿಸಿದರು.

ಕೂಡಲಸಂಗಮ ರೈಲು ನಿಲ್ದಾಣದಲ್ಲಿ ಕುಡಿಯುವ ನೀರು, ಆಸನಗಳ ವ್ಯವಸ್ಥೆ, ಬೆಳಕು ಹಾಗೂ ಶೌಚಗೃಹದ ವ್ಯವಸ್ಥೆ ಇಲ್ಲ. ಮಹಿಳಾ ಪ್ರಯಾಣಿಕರಿಗೆ ವಿಶ್ರಾಂತಿ ಕೊಠಡಿ, ರೈಲು ಬರುವ ಸಮಯ ತಿಳಿಸುವ ವಿದ್ಯುತ್ ಬೋರ್ಡ್ ವ್ಯವಸ್ಥೆ ಇಲ್ಲ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತಂದ ಗ್ರಾಮಸ್ಥರು ನಿಲ್ದಾಣದ ಪ್ಲಾಟ್‌ಫಾರ್ಮ್ ಎತ್ತರಿಸಬೇಕು ಎಂಬ ಬೇಡಿಕೆ ಮುಂದಿಟ್ಟರು.

ಬೆಳಗ್ಗೆ 10.30 ಗಂಟೆಗೆ ಸಂಚರಿಸುವ ವಿಜಯಪುರ-ಗದಗ ರೈಲನ್ನು ಕೂಡಲಸಂಗಮ ನಿಲ್ದಾಣದಲ್ಲಿ ನಿಲುಗಡೆಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಸಂಜೀವಕುಮಾರ ಕಿಶೋರ ಕೂಡಲಸಂಗಮ ರೈಲು ನಿಲ್ದಾಣಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಮನವಿ ಪತ್ರದಲ್ಲಿನ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹುಬ್ಬಳ್ಳಿ ನೈರುತ್ಯ ವಲಯದ ಡಿಆರ್ ಎಂ. ಹರ್ಷಾ ಖರೆ, ಗ್ರಾಮಸ್ಥರಾದ ಮಲ್ಲಪ್ಪ ಆಕಳವಾಡಿ, ವಾಸು ರೇವಣಕರ, ವಿಜಯಕುಮಾರ ನಾಯಕ, ರಕ್ಷಣಾ ಸೇವಾದಳ ಸಂಘಟನೆ ಅಧ್ಯಕ್ಷ ವಿಠ್ಠಲ ಗೌಡರ, ಹನುಮಂತ ದ್ಯಾವಣ್ಣವರ, ರಮೇಶ ಜೈಗೊಂಡರ, ಮೌನೇಶ ಮಾಂಡ್ರೆ, ಹನುಮಂತ ಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net