ಜಿಎಸ್ಟಿ ಇಳಿಕೆ ಲಾಭ ಗ್ರಾಹಕರಿಗೆ ವರ್ಗಾಯಿಸಲು ಒತ್ತಾಯ

gst
Published on

ಉಡುಪಿ: ಕೇಂದ್ರ ಸರ್ಕಾರ ಜಿಎಸ್​ಟಿ ಸುಧಾರಣೆಗೆ ಮಹತ್ವದ ಹೆಜ್ಜೆ ಇಟ್ಟಿದ್ದು, 4 ಸ್ತರದ ತೆರಿಗೆಯನ್ನು 2ಕ್ಕೆ ಇಳಿಸಿದೆ. ಅಗತ್ಯವಸ್ತುಗಳು ಮತ್ತು ದಿನಬಳಕೆ ವಸ್ತುಗಳಿಗೆ ಅತ್ಯಂತ ಕಡಿಮೆ ತೆರಿಗೆ ವಿಧಿಸಿದ್ದು, ಇದರ ಲಾಭವನ್ನು ಕಂಪೆನಿಗಳು ಮತ್ತು ಉತ್ಪಾದಕ ಸಂಸ್ಥೆಗಳು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ರಾಜ್ಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಿರ್ದೇಶಕ ಅಂಡಾರು ದೇವಿಪ್ರಸಾದ್​ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

2017ರಲ್ಲಿ ಜಿ.ಎಸ್​ಟಿ ಮೂಲಕ ನೇರ ತೆರಿಗೆ ವಿಧಾನವನ್ನು 4 ಸ್ತರಗಳಲ್ಲಿ ಅಳವಡಿಸಿ ಗ್ರಾಹಕರಿಗೆ ಮತ್ತು ವ್ಯಾಪಾರಸ್ಪರಿಗೆ ಅತ್ಯಂತ ಸುಲಭ ರೀತಿಯಲ್ಲಿ ತೆರಿಗೆ ಪಾವತಿಸಲು ಹಾಗು ಹೆಚ್ಚಿನ ನೋಂದಾಯಿತ ತೆರಿಗೆದಾರರನ್ನು ಆಕರ್ಷಿತಗೊಳಿಸಲಾಯಿತು. ತದನಂತರ ಪ್ರತಿ ತಿಂಗಳ ತೆರಿಗೆ ಒಳ ಹರಿವು ಗಣಿನೀಯವಾಗಿ ಹೆಚ್ಚುತ್ತಾ ಸರಿ ಸುಮಾರು ತಿಂಗಳಿಗೆ 2 ಲಕ್ಷ ಕೋಟಿ ಸಂಗ್ರಹವಾಗಿದೆ. ಪ್ರಸ್ತುತ ಜಿಎಸ್​ಟಿ ಸುಧಾರಣೆ ಮೂಲಕ ವೈಯಕ್ತಿಕ ವೈದ್ಯಕಿಯ ವಿಮೆ ಹಾಗು ಜೀವ ವಿಮೆ ಶೂನ್ಯಕ್ಕೆ ಇಳಿಸಲಾಗಿದೆ. ಶೇ. 99ರಷ್ಟು ದಿನ ಬಳಕೆಯ ವಸ್ತು ಶೇ. 5ರ ವ್ಯಾಪ್ತಿಗೆ ತರಲಾಗಿದೆ. ಶೇ. 28ರ ವ್ಯಾಪ್ತಿಯಲ್ಲಿದ್ದ ಐಷಾರಾಮಿ ವಸ್ತುಗಳನ್ನು ಕೂಡ ಶೇ. 18ರ ಮಿತಿಗೆ ತಂದಿರುವ ಕ್ರಮ ಸ್ವಾಗತಾರ್ಹ. ಇದರಿಂದ ಉತ್ಪಾದನಾ ರಂಗಕ್ಕೆ ಹೊಸ ಪ್ರೋತ್ಸಾಹ ಸಿಗಲಿದೆ. ದೇಶಿಯ ವಸ್ತುಗಳು ಜನ ಸಾಮಾನ್ಯರಿಗೆ ಕೈಗೆಡಿಸುವ ದರಗಳಲ್ಲಿ ದೊರಕಲಿದೆ. ಹೀಗಾಗಿ ಉತ್ಪಾದಕರು ಸರ್ಕಾರ ನೀಡಿದ ರಿಯಾಯಿತಿಯನ್ನು ಜನ ಸಾಮಾನ್ಯರಿಗೆ ವರ್ಗಾಯಿಸಬೇಕು. ಎಂಆರ್​ಪಿ ಬೆಲೆ ಇಳಿಕೆ ಮಾಡಬೇಕು. ಇದರಿಂದ ಮಾತ್ರ ಗ್ರಾಹಕರಿಗೆ ಪ್ರಯೋಜನವಾಗಲಿದೆ ಎಂದರು.

ವ್ಯಾಪಾರಿಗಳು ಉದ್ಧಿಮಗಾರರು ಹೆಚ್ಚಿನ ಸಂಖ್ಯೆಯಲ್ಲಿ ಜಿಎಸ್​ಟಿ ಕಾನೂನಿನ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಮಾಡಿದ ಸುಧಾರಣೆ ಯನ್ನು ಸಮರ್ಥ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಮತ್ತು ಸಹಾಯ ಹಸ್ತ ನೀಡಬೇಕು ಎಂದು ತಿಳಿಸಿದರು.

ಚೇಂಬರ್​ ಆ್​ ಕಾಮರ್ಸ್​ ಉಪಾಧ್ಯಕ್ಷ ವಾಲ್ಟರ್​ ಸಲ್ದಾನಾ, ಜಿಲ್ಲಾ ಟ್ಯಾಕ್ಸ್​ ಅಸೋಸಿಯೇಶನ್​ ಅಧ್ಯಕ್ಷ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net