

ಮೈಸೂರು: ಸರ್ಕಾರದ ಆದೇಶ ಉಲ್ಲಂಘಿಸಿ ಒಟಿಎಸ್ ಸಾಲ ತೀರುವಳಿ ಮೇಳ ಮಾಡುತ್ತಿಲ್ಲ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹಿನಕಲ್ ಬಳಿ ಇರುವ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ರೈತರು, ಬರಗಾಲದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಸಾಲ ತೀರಿಸಲು ಸಾಧವಾಗಿಲ್ಲ. ಹೀಗಾಗಿ ಮತ್ತೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ರಾಜ್ಯ ಮಾರ್ಗದರ್ಶಿ ಬ್ಯಾಂಕ್ (ಎಸ್‌ಎಲ್‌ಬಿಸಿ) ಆದೇಶ ಹೊರಡಿಸಿದೆ. ಬ್ಯಾಂಕ್ ಶಾಖೆಗಳಲ್ಲಿ ಒಟಿಎಸ್ (ಒನ್ ಟೈಮ್ ಸೆಟಲ್‌ಮೆಂಟ್) ಸಾಲ ತೀರುವಳಿ ಮೇಳ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಹೇಳಿದೆ ಎಂದರು.
ಆದರೆ ಬ್ಯಾಂಕ್ ಶಾಖೆಗಳಲ್ಲಿ ಈ ಕುರಿತು ಪ್ರಚಾರ ಮಾಡದೆ ಇರುವುದರಿಂದ ರೈತರು ಈ ಅವಕಾಶದಿಂದ ವಂಚಿತರಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಬ್ಯಾಂಕ್‌ನ ಕೇಂದ್ರ ಕಚೇರಿ ಬಳ್ಳಾರಿಯಲ್ಲಿ ಹೋರಾಟ ನಡೆಸಿದ ಪರಿಣಾಮ ಈ ಆದೇಶ ಹೊರಡಿಸಲಾಗಿದೆ. ಆದರೆ ಕೆಲ ಶಾಖೆಗಳು ಇದನ್ನು ಮರೆಮಾಚಿ ರೈತರಿಗೆ ವಂಚನೆ ಮಾಡುತ್ತಿವೆ ಎಂದು ದೂರಿದರು.
ಒಟಿಎಸ್ ಮೇಳದ ಅನುಕೂಲ ಎಲ್ಲ ರೈತರಿಗೂ ಸಿಗಬೇಕು. ನಿಮ್ಮ ಶಾಖೆಗಳಲ್ಲಿ ಹೆಚ್ಚು ಪ್ರಚಾರ ಮಾಡಿ ರೈತರಿಗೆ ವಂಚನೆ ಮಾಡದೆ ಅನುಕೂಲ ಮಾಡಿಕೊಡಬೇಕು. ಒಟಿಎಸ್ ಮಾಡಿದ ರೈತರಿಗೆ ಮತ್ತೆ ಸಾಲ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಯಾದವಮೂರ್ತಿ ಹಾಗೂ ಹಿರಿಯ ವ್ಯವಸ್ಥಾಪಕ ಭಾನುಪ್ರಕಾಶ್ ಪ್ರತಿಭಟನಾನಿರತ ರೈತರ ಮನವೊಲಿಸಿ ಬ್ಯಾಂಕ್‌ಗಳಲ್ಲಿ ಒಟಿಎಸ್ ಮೇಳದ ನಾಮಫಲಕ ಅನಾವರಣ ಮಾಡಿಸುವುದರ ಜತೆಗೆ ಹೆಚ್ಚು ಪ್ರಚಾರ ಮಾಡಿ ರೈತರಿಗೆ ಜಾಗೃತಿ ಮೂಡಿಸಲಾಗುವುದು. ಮೇಳದ ಅನುಕೂಲ ಎಲ್ಲ ರೈತರಿಗೂ ಸಿಗುವಂತೆ ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಮಹಿಳಾ ಅಧ್ಯಕ್ಷೆ ಕಮಲಮ್ಮ, ರೈತ ಮಹಿಳೆ ಸಾಕಮ್ಮ, ಅಂಬಳೆ ಮಂಜುನಾಥ್, ಬನ್ನೂರು ಸೂರಿ, ಶಂಭುದೇವನಪುರ ಪ್ರಭುಸ್ವಾಮಿ ಇತರರು ಇದ್ದರು.