ಶಾಲೆಗೆ ಭೂದಾನಿಯ ಹೆಸರಿಡಲು ಆಗ್ರಹ

LAXMESHWAR
Published on

ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದ ನವಚೇತನ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಕಟ್ಟಡ ನಿರ್ಮಾಣಕ್ಕೆ ಭೂದಾನ ಮಾಡಿದ ದ್ಯಾಮಣ್ಣ ತೋಟದ ಅವರ ಹೆಸರಿಡುವ ಒಡಂಬಡಿಕೆಯನ್ನು ಗಾಳಿಗೆ ತೂರಿದ್ದಾರೆ ಎಂದು ತೋಟದ ಕುಟುಂಬದವರು ಮತ್ತು ಅಭಿಮಾನಿಗಳು ಸೋಮವಾರ ಶಾಲೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ದ್ಯಾಮಣ್ಣ ತೋಟದ ಅವರು ಯಾವುದೇ ಫಲಾಪೇಕ್ಷೆ ಇಲ್ಲದೇ ಗ್ರಾಮದ ಮಕ್ಕಳ ಶೈಕ್ಷಣಿಕ ಕಳಕಳಿಯಿಂದ 2 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ದಾನಪತ್ರದಲ್ಲಿ ಶಾಲೆಗೆ ದ್ಯಾಮಣ್ಣ ತೋಟದ ಅವರ ಹೆಸರು ನಾಮಕರಣ ಮಾಡಲು ಒಡಂಬಡಿಕೆಯಾಗಿ ಆಡಳಿತ ಮಂಡಳಿಯೂ ಒಪ್ಪಿತ್ತು. ಆದರೆ ಇದೀಗ ಭೂದಾನಿಗಳ ಬದಲಾಗಿ ಬೇರೆಯವರ ಹೆಸರು ನಾಮಕರಣವಾಗಿರುವುದು ಕುಟುಂಬದವರಿಗೆ ನೋವುಂಟು ಮಾಡಿದೆ. ಆದ್ದರಿಂದ ನಮ್ಮ ಭೂಮಿ ನಮಗೆ ಕೊಡಿ ಇಲ್ಲಿ ಶಾಲೆ ನಡೆಸುವದು ಬೇಡ ಎಂದು ಒತ್ತಾಯಿಸಿದರು. ಘಟನೆಯಿಂದ ಕೆಲಕಾಲ ಗೊಂಲದದ ವಾತಾವರಣ ನಿರ್ಮಾಣವಾಗಿತ್ತು.

ಶಾಲೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ನಾಯಕ ಅವರು, ಆಡಳಿತ ಮಂಡಳಿ, ತೋಟದ ಕುಟುಂಬದವರು ಹಾಗೂ ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಭೂದಾನ ವೇಳೆ ಆದ ಎಲ್ಲ ಮಾತುಕತೆ, ಒಪ್ಪಂದದ ಬಗ್ಗೆ ಈ ತೋಟದ ಕುಟುಂಬದವರು ವಿವರಿಸಿದರು. ಈ ವೇಳೆ ಆಡಳಿತ ಮಂಡಳಿಯವರು ಶಾಲೆಗೆ ಭೂದಾನಿಗಳ ನಾಮಕರಣಕ್ಕೆ ಆಡಳಿತ ಮಂಡಳಿಯವರೆಲ್ಲರ ಸಹಮತವಿದೆ. ದಾಖಲೆ ಮಾಡುವಾಗ ತಾಂತ್ರಿಕ ಸಮಸ್ಯೆಯಿಂದ ದಾಖಲೆ ಪತ್ರದಲ್ಲಿ ಹೆಸರು ಬದಲಾಗಿದೆ. ಈ ಕುರಿತಂತೆ ಮೇಲಾಧಿಕಾರಿಗಳಿಗೆ ಆಡಳಿತ ಮಂಡಳಿಯವರ ಮನವಿ ಪತ್ರ ಹಾಗೂ ಭೂಧಾನಿಗಳ ಪತ್ರಗಳೊಂದಿಗೆ ದಾಖಲೆ ಸಲ್ಲಿಸಲಾಗುವುದು. ಸರಿಪಡಿಸಲು ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ ಶೈಕ್ಷಣಿಕ ಕಾರ್ಯ ಚಟುವಟಕೆಗೆ ತೊಂದರೆಯಾಗದಂತೆ ಸಹಕರಿಸಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಎನ್.ಬಿ.ಹರವಿ, ಕಾರ್ಯದರ್ಶಿ ಸುಭಾಸ ಹುಲಗೂರ, ಆರ್.ಎಚ್.ಗದಗ, ಸಂಜೀವ ತೋಟದ, ಅಶೋಕ ತೋಟದ, ಡಾ.ರಾಹುಲ್ ತೋಟದ, ಸೂಗೀರಪ್ಪ ಬೆಳವಿಗಿ, ಸುರೇಶ ಭಂಡಾರಿ, ಬಸವರಾಜ ಹಂಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net