ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್​ ಹೆಸರಿಡಲು ಆಗ್ರಹ

udp-16-jayakrishna
Published on

ಉಡುಪಿ: ರಾಜ್ಯ ಸರ್ಕಾರ 5 ವಿಮಾನ ನಿಲ್ದಾಣಗಳಿಗೆ ಹೆಸರು ಸೂಚಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದು, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೇಂದ್ರದ ಮಾಜಿ ಸಚಿವ, ಮಂಗಳೂರು ಮೂಲದ ಜಾರ್ಜ್​ ಫೆರ್ನಾಂಡಿಸ್​ ಅವರ ಹೆಸರಿಡಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಭಾರತೀಯ ರಾಜಕಾರಣದ ಕಣ್ಮಣಿಯಾಗಿ ಶೋಭಿಸಿದ ಜಾರ್ಜ್​ ಫೆರ್ನಾಂಡಿಸ್​ ಅವರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾಡಬೇಕೆಂಬುದು ಬಹುಕಾಲದ ಆಗ್ರಹ. ಮಂಗಳೂರು-ಮುಂಬಯಿ ನಡುವಣ ಸಂಚಾರಕ್ಕೆ ವರದಾನವಾಗಿ ದೊರೆತ ಕೊಂಕಣ ರೈಲ್ವೆ, ಮಂಗಳೂರು - ಬೆಂಗಳೂರು ನಡುವಣ ಬ್ರಾಡ್​ ಗೇಜ್​ ಪರಿವರ್ತನೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ನೈಟ್​ ಲ್ಯಾಂಡಿಂಗ್​ ವ್ಯವಸ್ಥೆಯನ್ನು ಮಾಡುವ ಮೂಲಕ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಗೊಳಿಸಿದ ಯೋಜನೆ, ಕಾರವಾರದ ಪ್ರತಿಷ್ಠಿತ ಸೀ ರ್ಬಡ್​ ಯೋಜನೆ ಹೀಗೆ ಹತ್ತಾರು ಯೋಜನೆಗಳು ಸಾಕಾರಗೊಳ್ಳುವಲ್ಲಿ ಜಾರ್ಜ್​ ಅವರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಇಲ್ಲಿನ ಶಾಸಕರು ಮತ್ತು ಲೋಕಸಭಾ ಸದಸ್ಯರು ಜಾರ್ಜ್​ ಹೆಸರು ಶಿಫರಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ವಿಧಾನಸಭೆಯಲ್ಲಿ ಪ್ರತಿಪಾದಿಸಲ್ಪಟ್ಟಿರುವ ಎರಡು ಹೆಸರುಗಳು ( ಕೋಟಿ ಚೆನ್ನಯ, ರಾಣಿ ಅಬ್ಬಕ್ಕ) ಈಗಾಗಲೆ ನಮ್ಮ ಸಾಂಸತಿಕ ಚರಿತ್ರೆಯ, ನಾಡ ಇತಿಹಾಸದ ಭಾಗವಾಗಿವೆ. ಸಾಕಷ್ಟು ಕಡೆ ರಸ್ತೆ, ನಗರ ವೃತ್ತಗಳಿಗೆ ನಾಮಕರಣಗೊಂಡವೆ. ಎರಡೂ ಹೆಸರುಗಳಲ್ಲಿ ಅಧ್ಯಯನ ಕೇಂದ್ರಗಳು, ಪೀಠಗಳು ಸರಕಾರಿ ವಲಯದಲ್ಲು ಸ್ಥಾಪನೆಗೊಂಡಿವೆ. ನಮ್ಮ ಕಲಿಕೆಯ-ಅಧ್ಯಯನ ಸಾಮಾಗ್ರಿಯ ಭಾಗ ನಮ್ಮ ಆರಾಧನೆಯ ಭಾಗವಾಗಿವೆ.ನಮ್ಮ ಜನಪದದ, ಯಕ್ಷಗಾನದ ಭಾಗಗಳಾಗಿ ನಿತ್ಯ ಬಿತ್ತರಗೊಳ್ಳುತ್ತಲೇ ಇವೆ.ಅರ್ಥಾತ್​ ನಮ್ಮ ನಾಡಲ್ಲಿ ಈ ಎರಡೂ ಹೆಸರುಗಳಿಗೆ ಎಂದೂ ಅಳಿವಿಲ್ಲ. ಒಂದು ಜೀವಿತಾವಧಿ ಪೂರ್ಣ ಸರಳ, ಪಾರದರ್ಶಕ ರಾಜಕಾರಣದಲ್ಲಿ, ಸಾಧನೆ ಮಾಡಿರುವವರಿಗೆ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಕಿಂಚಿತ್​ ಪ್ರತಿ ಗೌರವವನ್ನಾದರೂ ನೀಡಿ ಋಣ ಭಾರವನ್ನು ತಗ್ಗಿಸಿಕೊಳ್ಳಬೇಕು. ನಮ್ಮ ಪೀಳಿಗೆ ಅವರನ್ನು ಮರೆತು ಸೂಕ್ತ ಜಾಗಗಕ್ಕೆ ಅವರ ಹೆಸರನ್ನು ನಾಮಕರಣ ಮಾಡದೆ ಹೋದರೆ ಮುಂದೆ ಒಂದೆರಡು ದಶಕಗಳಲ್ಲಿ ಬಾಹ್ಯ ಬದುಕಿನಲ್ಲಿ ಅಳಿದು ಹೋಗಬಹುದು ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್​ ಪ್ರಕಾಶ್​ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net