ಅತಿಥಿ ಉಪನ್ಯಾಸಕರ ನೇಮಕ ತಡೆಯಾಜ್ಞೆ ತೆರವಿಗೆ ಆಗ್ರಹ

Published on

ಮೈಸೂರು: ಅತಿಥಿ ಉಪನ್ಯಾಸಕರ ನೇಮಕ ಸಂಬಂಧ ಇರುವ ತಡೆಯಾಜ್ಞೆಯನ್ನು ಸರ್ಕಾರ ತೆರವುಗೊಳಿಸಲು ಮುಂದಾಗಬೇಕು ಎಂದು ಎಚ್.ಡಿ.ಕೋಟೆ ತಾಲೂಕು ಮುಳ್ಳೂರಿನ ಎಂ.ಆರ್. ಮಹೇಶ ಆಗ್ರಹಿಸಿದರು.

ರಾಜ್ಯ ಹೈಕೋರ್ಟ್ 2024ರಲ್ಲಿ ಆದೇಶ ಹೊರಡಿಸಿ, ಯುಜಿಸಿ ಅರ್ಹತೆ ಪಡೆದಿರುವವರಿಗೆ ಮಾತ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಬೇಕು ಎಂದು ತಿಳಿಸಿದೆ. ಆದರೆ ಸರ್ಕಾರ ಈ ಅರ್ಹತೆ ಇಲ್ಲದವರಿಗೂ ಅನುಕೂಲವಾಗಲೆಂಬ ಉದ್ದೇಶದಿಂದ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಲ್ಲದೇ ವಿದ್ಯಾರ್ಥಿಗಳ ಹಿತದೃಷ್ಟಿ ಎಂಬ ಕಾರಣ ನೀಡಿ ಆ ವೇಳೆಗಾಗಲೇ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರನ್ನು ತಾತ್ಕಾಲಿಕವಾಗಿ ಮುಂದುವರಿಸಿತು ಎಂದರು.

ಆದರೆ ಆ ಬಳಿಕವೂ ಯುಜಿಸಿ ಅರ್ಹತೆ ಹೊಂದಿರುವವರನ್ನು ಹೊಸ ನೇಮಕ ಮಾಡಿಕೊಳ್ಳದೆ ಅರ್ಹತೆ ಇಲ್ಲದವರನ್ನು ಮುಂದುವರಿಸಿದ್ದಾರೆ. ಇದರಿಂದ ಯುಜಿಸಿ ಅರ್ಹತೆ ಹೊಂದಿರುವ ಸುಮಾರು ಐದು ಸಾವಿರ ಮಂದಿ ನೇಮಕಾತಿಗಾಗಿ ಕಾಯ್ದು ಕುಳಿತಿದ್ದಾರೆ ಎಂದು ಹೇಳಿದರು.

ಆದ್ದರಿಂದ ಸರ್ಕಾರ ಈ ಸಂಬಂಧ ವಿಭಾಗೀಯ ಪೀಠದಲ್ಲಿ ಮಾಡಿರುವ ತಡೆಯಾಜ್ಞೆ ತೆರವಿಗೆ ಮುಂದಾಗಬೇಕು. ಯುಜಿಸಿ ಅರ್ಹತೆ ಹೊಂದಿರುವವರ ನೇಮಕಾತಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಡಾ.ಲಿಂಗರಾಜು, ಎ.ಸಿ.ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net