

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಹೋಬಳಿ ಕಲ್ಯಾಣಿ ಕೊಪ್ಪಲು ಗ್ರಾಮ ಘಟಕದ ವತಿಯಿಂದ ಬಗರ್‌ಹುಕುಂ ಸಾಗುವಳಿದಾರರಿಗೆ ಶೀಘ್ರ ಹಕ್ಕು ಪತ್ರ ನೀಡಲು ಹಾಗೂ ಸಾಗುವಳಿದಾರರಿಗೆ ತೊಂದರೆ ನೀಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಸೋಮವಾರ ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಪಟ್ಟಣದ ಅನಂತ ರಾಮ್ ವೃತ್ತದ ಬಳಿಯಿಂದ ಹತ್ತಾರು ಸಂಘಟನೆಯ ಕಾರ್ಯಕರ್ತರು ರ‌್ಯಾಲಿ ಮೂಲಕ ತಾಲೂಕು ಕಚೇರಿ ಆಗಮಿಸಿ ಪ್ರತಿಭಟನೆ ಕುಳಿತರು. ಇದೇ ವೇಳೆ ಸಂಘದ ತಾಲೂಕು ಅಧ್ಯಕ್ಷ ಎನ್. ಎಲ್.ಭರತ್ ರಾಜ್ ಮಾತನಾಡಿ, ಹಲವಾರು ದಶಕಗಳಿಂದ ಸರ್ಕಾರಿ ಜಮೀನಿನಲ್ಲಿ ಒಂದು ಹಾಗೂ ಎರಡು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಷ್ಟಪಟ್ಟು ವ್ಯವಸಾಯ ಮಾಡಿ ಜೀವನ ನಡೆಸುತ್ತಿರುವ ಬಡ ರೈತರಿಗೆ ಹಕ್ಕುಪತ್ರ ನೀಡದಿರುವುದು ಖಂಡನೀಯ. ಇಲ್ಲಿಯವರೆಗೆ ಅಧಿಕಾರ ನಡೆಸಿರುವ ಯಾವ ಸರ್ಕಾರಗಳಿಗೂ ಇಚ್ಛಾಶಕ್ತಿ ಇಲ್ಲದಿರುವುದು ಅವರ ರೈತ ವಿರೋಧಿ ನೀತಿಯನ್ನು ತೋರಿಸುತ್ತದೆ. ನೂರೆಂಟು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ರೈತರಿಗೆ ಭೂಮಿ ನೀಡುವುದನ್ನು ಗಗನ ಕುಸುಮವಾಗಿಸಿರುವ ಸರ್ಕಾರದ ನೀತಿಗಳು ಖಂಡನೀಯ. ಅದೇ ರೀತಿ ಅಧಿಕಾರಿಗಳು ಸಹ ಬಡ ಬಗರ್ ಹುಕುಂ ರೈತರ ಒಕ್ಕಲೆಬ್ಬಿಸಿ ಬಲಾಡ್ಯ ಭೂಗಳ್ಳರಿಗೆ ಅನುಕೂಲ ಮಾಡಿಕೊಡುವ ಪ್ರಕರಣಗಳು ತಾಲೂಕಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಿವೆ. ಲಕ್ಷಾಂತರ ರೂ. ಲಂಚ ಪಡೆದು ಭೂಗಳ್ಳರಿಗೆ ಅನುಕೂಲವಾಗುವ ರೀತಿ ಜಮೀನು ಪೋಡಿ ಮಾಡಿಕೊಡಲಾಗುತ್ತಿದೆ. ಕೆಲವರು ಅನುಭವದಲ್ಲಿ ಇಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು 60-70 ವರ್ಷಗಳಿಂದ ಅನುಭವದಲ್ಲಿರುವ ರೈತರ ಭೂಮಿಯನ್ನು ನಮ್ಮದು ಎಂದು ನಕಲಿ ದಾಖಲೆ ತೋರಿಸಿ ಒಕ್ಕಲೆಬ್ಬಿಸುತ್ತಿದ್ದು, ಈ ಕೃತ್ಯಕ್ಕೆ ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಹ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದರ ಬಗ್ಗೆ ಸಮಗ್ರವಾದ ತನಿಖೆ ಆಗಬೇಕು ನಕಲಿ ಹಕ್ಕುಪತ್ರ ಮತ್ತೆ ಆರ್.ಟಿ.ಸಿ.ಗಳನ್ನು ರದ್ದು ಪಡಿಸಬೇಕು, ಉಳುವವನೇ ಭೂಮಿಯ ಒಡೆಯ ಎಂಬ ಕಾಯಿದೆಗೆ ಅನುಸಾರವಾಗಿ ವ್ಯವಸಾಯ ಮಾಡುವನಿಗೆ ಭೂಮಿ ಹಕ್ಕು ಪತ್ರವನ್ನು ನೀಡಕು. ಬಿ.ಜಿ.ಪುರ ಹೋಬಳಿ, ಕದಬಳ್ಳಿ. ಎಲ್ಲೆ ಸರ್ವೆ ನಂ 23 ಹಾಗೂ 95 ರಲ್ಲಿ ಹಲವಾರು ಬಡ ರೈತರು ಬಗರ್‌ಹುಕುಂ ಸಾಗುವಳಿ ಮಾಡುತ್ತಾ ಹಕ್ಕುಪತ್ರಕ್ಕಾಗಿ ನಮೂನೆ 53 ರಿಂದ 59 ರವರೆಗೆ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಇಲ್ಲಿನ ಸರ್ವೇ ನಂಬರ್‌ಗಳಲ್ಲಿ ವ್ಯವಸಾಯ ಮಾಡುತ್ತಾ ಅನುಭವದಲ್ಲಿರುವ ರೈತರ ಜಮೀನು ಜಾಗವನ್ನು ಕೆಲ ಬಲಾಡ್ಯರಿಗೆ ಅಕ್ರಮವಾಗಿ ಪೋಡು ಮಾಡುವ ಮೂಲಕ ಮೋಜಿಣಿ ಇಲಾಖೆಯ ಅಧಿಕಾರಿಗಳು ನೈಜ ರೈತರಿಗೆ ವಂಚನೆ ಮಾಡಿದ್ದಾರೆ. ಆಗಾಗಿ ಅಕ್ರಮವಾಗಿ ಪೋಡು ಮಾಡಿರುವುದನ್ನು ರದ್ದುಪಡಿಸಿ ನೈಜ ಬಗರ್‌ಹುಕುಂ ಸಾಗುವಳಿದಾರರನ್ನು ರಕ್ಷಣೆ ಮಾಡಬೇಕು. ಅವರಿಗೆ ತಕ್ಷಣ ಸಾಗುವಳಿ ಪತ್ರ ನೀಡಲು ಅಗತ್ಯ ಕ್ರಮ ವಹಿಸಬೇಕೆಂದು ತಹಸೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಗುರುಸ್ವಾಮಿ, ಕೆ.ಎನ್. ಮೂರ್ತಿ, ಎನ್. ಮಹದೇವಯ್ಯ, ಮರಿಲಿಂಗೇಗೌಡ, ಸತೀಶ್,ಸಣ್ಣಶೆಟ್ಟಿ, ಪ್ರಕಾಶ್, ಚಿಕ್ಕರಾಚಯ್ಯ, ನಾಗಮಣಿ ಸೇರಿದಂತೆ ಇತರರು ಇದ್ದರು.