ಆಸ್ತಿಗಳನ್ನು ‘ಬಿ’ ಖಾತೆಗೆ ಒಳಪಡಿಸಲು ಆಗ್ರಹ

ನಾಲತವಾಡ ಪಟ್ಟಣದ 1 ಮತ್ತು 2ನೇ ವಾರ್ಡಿನಲ್ಲಿ ವಾಸಿಸುತ್ತಿರುವ ಕುಟುಂಬಗಳ ಆಸ್ತಿಗಳನ್ನು ಶೀಘ್ರ ‘ಬಿ’ ಖಾತೆಗೆ ಒಳಪಡಿಸಬೇಕೆಂದು ಆಗ್ರಹಿಸಿ ನಿವಾಸಿಗಳು ಬುಧವಾರ ಪಪಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಾಲತವಾಡ ಪಟ್ಟಣದ 1 ಮತ್ತು 2ನೇ ವಾರ್ಡಿನಲ್ಲಿ ವಾಸಿಸುತ್ತಿರುವ ಕುಟುಂಬಗಳ ಆಸ್ತಿಗಳನ್ನು ಶೀಘ್ರ ‘ಬಿ’ ಖಾತೆಗೆ ಒಳಪಡಿಸಬೇಕೆಂದು ಆಗ್ರಹಿಸಿ ನಿವಾಸಿಗಳು ಬುಧವಾರ ಪಪಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
Published on

ನಾಲತವಾಡ: 40 ವರ್ಷಗಳಿಂದಲೂ ಸ್ಥಳೀಯ 1 ಮತ್ತು 2ನೇ ವಾರ್ಡಿನಲ್ಲಿ ವಾಸಿಸುತ್ತಿರುವ ಕುಟುಂಬಗಳ ಆಸ್ತಿಗಳನ್ನು ಈವರೆಗೂ ‘ಬಿ’ ಖಾತೆಗೊಳಪಡಿಸಿ ಉತಾರೆ ವಿತರಿಸುತ್ತಿಲ್ಲ. ಹೀಗೆ ಮುಂದುವರಿದರೆ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿ ಜಗದೇವ ನಗರದ ನಿವಾಸಿಗಳು ಬುಧವಾರ ಪಪಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಗ್ರಾಪಂ ಇದ್ದ ವೇಳೆಯಲ್ಲೇ 100 ರಿಂದ 150 ಮನೆಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಇನ್ನು ಹಲವರು ಹಕ್ಕು ಪತ್ರ ಕಳೆದುಕೊಂಡಿದ್ದಾರೆ. 40 ವರ್ಷಗಳಿಂದಲೂ ಸತತ ಕರ ಭರಣಾ ಮಾಡಿದ್ದೇವೆ. ನಿರಂತರ ನಮ್ಮ ಆಸ್ತಿಗಳಿಗೆ ಕರ ವಸೂಲಿ ನಡೆದಿದೆ. ಆದರೂ ನಮ್ಮ ಆಸ್ತಿಗಳನ್ನು ಇ-ಸ್ವತ್ತಿಗೆ ಒಳಪಡಿಸಿಲ್ಲ, ತಾವು ಖುದ್ದು ಸ್ಥಳಗಳಿಗೆ ಭೇಟಿ ನೀಡಿ ಕಟ್ಟಡ ಹಾಗೂ ಖುಲ್ಲಾ ಸ್ಥಳಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದರು.

ಹಲವಾರು ವರ್ಷಗಳಿಂದಲೂ 1 ಮತ್ತು 2ನೇ ವಾರ್ಡಿನಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಬ್ಯಾಂಕ್‌ಗಳಲ್ಲಿ ವ್ಯವಹರಿಸಲು ಉತಾರೆಗಳ ಅವಶ್ಯವಿದೆ. ಮನಬಂದಂತೆ ಕರ ಮಾತ್ರ ಭರಿಸಿಕೊಳ್ಳುತ್ತಿದ್ದೀರಿ, ಆದರೆ, ನಮಗೆ ದಾಖಲೆ ಏಕೆ ನೀಡುತ್ತಿಲ್ಲ ಎಂದ ಮುತ್ತಿಗೆದಾರರು ನಮ್ಮ ಆಸ್ತಿಗಳಿಗೆ ಶೀಘ್ರ ‘ಬಿ’ ಖಾತೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಭರವಸೆ: ಸಮಸ್ಯೆ ಆಲಿಸಿದ ಪಪಂ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಪ್ರತ್ವಿರಾಜ ನಾಡಗೌಡ ಹಾಗೂ ಸಿಒ ಈರಣ್ಣ ಕೊಣ್ಣೂರ ಅವರು ಶೀಘ್ರ ಆಡಳಿತ ಮಂಡಳಿ ಸಭೆ ಕರೆದು ಚರ್ಚಿಸಿ ಆದಷ್ಟು ಬೇಗ ನ್ಯಾಯ ಒದಗಿಸುವ ಭರವಸೆ ನೀಡಿದರು.

ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡ್ರ, ಸದಸ್ಯರಾದ ಬಾಬು ಕ್ಷತ್ರಿ, ಯುವ ಜನ ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ, ವೀರೇಶ ಚಲವಾದಿ, ಸಯ್ಯದ ದಖಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net