

ತಿ.ನರಸೀಪುರ: ಗೋಪಾಲಪುರ ಗ್ರಾಮದಲ್ಲಿರುವ ಸರ್ವೇ ನಂ.7 ಜಾಗವನ್ನು ಈಗಾಗಲೇ ಅನುಭವಿಸುತ್ತಾ ಬಂದಿರುವ ಮಾದಿಗ ಸಮುದಾಯದವರಿಗೆ ನೀಡಬೇಕೆಂದು ನಿವಾಸಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ನೂರಾರು ನಿವಾಸಿಗಳು ವಿವಿಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ನೇತೃತ್ವ ವಹಿಸಿದ ಗೋಪಾಲಪುರ ನಿವಾಸಿ ಮಂಜುನಾಥ್ ಮಾತನಾಡಿ, ಸುಮಾರು 65 ವರ್ಷಗಳ ಹಿಂದೆ ಎನ್.ರಾಚಯ್ಯ ಅವರು ಸರ್ವೇ ನಂ.7ರ ಜಾಗವನ್ನು ಭೂ ಮಾಲೀಕರಿಂದ ಸರ್ಕಾರದಿಂದ ಖರೀದಿಸಿ ಗೋಪಾಲಪುರ ನಿವಾಸಿಗಳಿಗೆಂದೇ ಮೀಸಲಿಟ್ಟ ಜಾಗವೆಂದು ಗುರುತಿಸಲಾಗಿದೆ. ಅದರೆ ಜೂನ್ 26 ರಂದು ಪುರಸಭೆ ಮುಖ್ಯಾಧಿಕಾರಿಗಳು ಏಕಾಏಕಿ ಜೆಸಿಬಿಯಿಂದ ಗುಡಿಸಲು, ಶೆಡ್ ಹಾಗೂ ದಂಡಿನ ಮಾರಮ್ಮ ದೇವಸ್ಥಾನವನ್ನು ಸರ್ಕಾರದ ಯಾವುದೇ ಆದೇಶವಿಲ್ಲದೇ ನಾಶ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಪಾಲಪುರದಲ್ಲಿ ಅನೇಕ ಕುಟುಂಬಗಳು ಪ್ರತಿಯೊಂದು ಮನೆಯಲ್ಲಿ 7 ರಿಂದ 8 ಸಣ್ಣ ಕುಟುಂಬಗಳು ಒಂದೇ ಸುರಿನಲ್ಲಿ ಮೂಲಸೌಕರ್ಯಗಳಿಲ್ಲದೆ ವಾಸಿಸುತ್ತಿವೆ. ಕೆಲವು ಕಂದಾಯ ಅಧಿಕಾರಿಗಳು ಯಾವುದೇ ದಾಖಲೆಯ ಆಧಾರವಿಲ್ಲದೇ ಏಕಾಏಕಿ ಸರ್ವೇ ನಂ.7ಜಾಗದ ಆರ್‌ಟಿಸಿಯಲ್ಲಿ ಪುರಸಭೆಗೆ ಭೂ ಸ್ವಾದೀನ ಎಂದು ನಮೂದು ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಸುರೇಶಾಚಾರ್ ಆಗಮಿಸಿ ಮನವಿ ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಮಾದಿ ಸಮುದಾಯ ಹೋರಾಟಗಾರ ರಾಚಪ್ಪ, ರಾಜಣ್ಣ, ಪ್ರದೀಪ್, ದಿನೇಶ್,ಎಂ, ನಟರಾಜು, ಸಿದ್ದಯ್ಯ, ನಾಗರಾಜು.ಕೆ, ಅನಿಲ್.ಎಂ, ಧೀರಜ್.ಎಸ್, ಗಿರೀಶ್ ಕುಮಾರ್, ಎಸ್, ಮಹೇಶ್, ಅಮೃತ, ಮಾದೇಶ್.ಸಿ, ನರಸಿಂಹ, ಶಿವು, ಶೋಭಾ, ನವೀನ್, ವಿಶ್ವ, ರಾಹುಲ್, ರಮೇಶ್, ಅರ್ಜುನ್ ಹಾಗೂ ನೂರಾರು ಗ್ರಾಮಸ್ಥರು ಇದ್ದರು.