ಕೊಡವರಿಗೆ ಪ್ರಾತಿನಿಧ್ಯ ನೀಡಲು ಆಗ್ರಹ

cnc
Published on

ಮಡಿಕೇರಿ: ಕೊಡವ ಸಾಂಪ್ರದಾಯಿಕ ಆವಾಸಸ್ಥಾನವನ್ನು ಒಳಗೊಂಡಿರುವ ವಿಶೇಷ ಕೊಡವ ಅಸೆಂಬ್ಲಿ ಮತ್ತು ಸಂಸದೀಯ ಕ್ಷೇತ್ರವನ್ನು ರಚಿಸಬೇಕು. ಆ ಮೂಲಕ ನಮಗೆ ಕೇಂದ್ರ ವಿಸ್ತಾ ಅರ್ಥಾತ್ ಹೊಸ ಪಾರ್ಲಿಮೆಂಟ್ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಹಕ್ಕೊತ್ತಾಯ ಮಂಡಿಸಿತು.

ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ಸಂಘ ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ಅಸೆಂಬ್ಲಿಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ, ಆದಿಮಸಂಜಾತ ಕೊಡವರಿಗೆ ಕೊಡವ ಸಂಪ್ರದಾಯಿಕ ಜನ್ಮಭೂಮಿಯಲ್ಲಿ ಪ್ರತ್ಯೇಕ ಲೋಕಸಭೆ ಮತ್ತು ಅಸಂಬ್ಲಿ ಕೊಡವ ಮತ ಕ್ಷೇತ್ರವನ್ನು ರಚಿಸಬೇಕು ಎಂದು ಪ್ರತಿಪಾದಿಸಿದರು.

೨೦೨೬ರಲ್ಲಿ ಸಂಸತ್ತಿನ ಮತ್ತು ಅಸೆಂಬ್ಲಿಯ ಕ್ಷೇತ್ರದ ಗಡಿ ಮತ್ತು ಸಂಖ್ಯೆ ಪುನರ್ ನಿರ್ಣಯಿಸಲಾಗುತ್ತದೆ. ಇದಕ್ಕಾಗಿ ಪ್ರಕ್ರಿಯೆಯು ಪ್ರಾರಂಭವಾಗಿದೆ. ಇದರ ದುರ್ಲಾಭವನ್ನು ಪಡೆದುಕೊಂಡು ಕೊಡವ ವಿರೋಧಿಗಳು ಆದಿಮಸಂಜಾತ ಕೊಡವರನ್ನು ಹಣಿದು ಅಂಚಿಗೆ ಹಾಕಲು ಸಂಚು ಹೂಡುತ್ತಿದ್ದಾರೆ. ರಾಜ್ಯದಲ್ಲಿ ಗರಿಷ್ಟ ಪ್ರಾತಿನಿಧ್ಯವನ್ನು ಹೊಂದಿರುವ ಜನಸಂಖ್ಯಾ ಪ್ರಾಭಲ್ಯದ ಕೂಟ ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನು ನಿರ್ಮಿಸುವ ನೆಪದಲ್ಲಿ ಸುಳ್ಯ ತಾಲೂಕನ್ನು ಕೊಡಗಿಗೆ ಸೇರಿಸಿ ಪ್ರತ್ಯೇಕ ಕೊಡಗು ಲೋಕಸಭಾ ಕ್ಷೇತ್ರ ನಿರ್ಮಿಸಿ ಶಾಶ್ವತವಾಗಿ ತಾವು ಸಂಸತ್ ಪ್ರಾತಿನಿಧ್ಯ ಪಡೆಯುವುದರೊಂದಿಗೆ ಕೊಡವರಿಗೆ ಪ್ರಾತಿನಿಧ್ಯ ಸಂಸತ್ತಿನಲ್ಲಿ ದಕ್ಕದಂತೆ ಒಳಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.

ಪ್ರಸ್ತುತ ಸರ್ಕಾರವು ಜನಸಂಖ್ಯೆಯ ಆಧಾರದ ಮೇಲೆ ವಿಧಾನಸಭೆ ಮತ್ತು ಸಂಸತ್ತನ್ನು ಮರುಹೊಂದಿಸುತ್ತಿದೆ ಮತ್ತು ಇದು ಮತ್ತೊಂದು ರೀತಿಯಲ್ಲಿ ಸರ್ಕಾರವು ದೇಶದ ಒಳಿತಿಗಾಗಿ ಜನಸಂಖ್ಯಾ ನಿಯಂತ್ರಣ ಮಾಡಿದ ದೇಶಭಕ್ತ ಕೊಡವರನ್ನು ಸಂಸತ್ತಿನಲ್ಲಿ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಮೂಲಕ ಶಿಕ್ಷಿಸುತ್ತಿದೆ. ಆದಿಮಸಂಜಾತ ಕೊಡವರು ಒಂದೇ ಜನಾಂಗವಾಗಿದ್ದು, ಈ ಮಣ್ಣಿನೊಂದಿಗೆ ಅಂತರ್ಗತವಾದ ಅನನ್ಯ ಮತ್ತು ಅಪರೂಪದ ಬುಡಕಟ್ಟು ಜನರಾಗಿದ್ದೇವೆ. ರಾಜಕೀಯ ಕ್ಷೇತ್ರದಲ್ಲಿ ನಮಗೆ ಗೌರವಾನ್ವಿತ ಸ್ಥಾನಬೇಕು ಎಂದು ಒತ್ತಾಯಿಸಿದರು.

ಸಿಎನ್‌ಸಿ ನಮ್ಮ ಪವಿತ್ರ ಯಾತ್ರಾಸ್ಥಳವಾದ ತಲಕಾವೇರಿಯಲ್ಲಿ ಪೂಜ್ಯ ಪ್ರಾರ್ಥನೆಗಳನ್ನು ನಡೆಸುವ ಮೂಲಕ ಮತ್ತು ನಮ್ಮ ಈ ಧರ್ಮಯಾತ್ರೆ (ಮಿಷನ್) ಯಶಸ್ವಿಯಾಗಲು ಕೋರಲಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ, ರೇಖಾ ನಾಚಪ್ಪ, ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ಚೋಳಪಂಡ ಜ್ಯೋತಿ, ನಂದಿನೆರವಂಡ ನಿಶಾ, ಶ್ರೀಮತಿ ಅಪ್ಪಾರಂಡ ನಂದಿನಿ, ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್ ಇತರರು ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಕ್ಕೊತ್ತಾಯ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net