ಭೂಮಿ ಕಳೆದುಕೊಂಡವರಿಗೆ ಕೆಲಸ ನೀಡಲು ಆಗ್ರಹ

ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರದ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡುವ ಕೇಂದ್ರದ ಬಳಿ ಕೆಂಪಿಸಿದ್ದನ ಹುಂಡಿ ರೈತರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಬಸವರಾಜ್,ಉಮೇಶ್, ರವಿ, ರಮೇಶ್, ಭರತ್, ಲಕ್ಷ್ಮಿ, ಚಿಕ್ಕತಾಯಮ್ಮ, ಹೂವಮ್ಮ, ಜಯಲಕ್ಷ್ಮಿ, ಚಿಕ್ಕ ಮಸನಮ್ಮ, ನಾಗರತ್ನ, ಮಂಗಳ ಸೇರಿದಂತೆ ಮತ್ತಿತರರು ಇದ್ದರು.
ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರದ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡುವ ಕೇಂದ್ರದ ಬಳಿ ಕೆಂಪಿಸಿದ್ದನ ಹುಂಡಿ ರೈತರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಬಸವರಾಜ್,ಉಮೇಶ್, ರವಿ, ರಮೇಶ್, ಭರತ್, ಲಕ್ಷ್ಮಿ, ಚಿಕ್ಕತಾಯಮ್ಮ, ಹೂವಮ್ಮ, ಜಯಲಕ್ಷ್ಮಿ, ಚಿಕ್ಕ ಮಸನಮ್ಮ, ನಾಗರತ್ನ, ಮಂಗಳ ಸೇರಿದಂತೆ ಮತ್ತಿತರರು ಇದ್ದರು.
Published on

ನಂಜನಗೂಡು: ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆಂಪಿಸಿದ್ದನಹುಂಡಿ ಗ್ರಾಮದ ರೈತರಿಂದ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ನೂರಾರು ಎಕರೆ ಭೂಮಿಯನ್ನು ಸರ್ಕಾರ ಕೆಐಎಡಿಬಿಯ ಮೂಲಕ ವಶಕ್ಕೆ ಪಡೆಯಲಾಗಿದೆ. ಆದರೆ ಭೂಮಿ ಕಳೆದುಕೊಂಡ ಬಹುತೇಕ ರೈತರಿಗೆ ಕಾರ್ಖಾನೆಗಳಿಂದ ಕಾಯಂ ಉದ್ಯೋಗವನ್ನು ಕೊಡಿಸಲು ಜಿಲ್ಲಾಡಳಿತ, ಕೆಐಎಡಿಬಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರಗಳು ವಿಫಲವಾಗಿವೆ ಎಂದು ಆರೋಪಿಸಿ ಕೆಂಪಿಸಿದ್ದನ ಹುಂಡಿ ಗ್ರಾಮಸ್ಥರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡುವ ಕೇಂದ್ರದ ಬಳಿ ಸೇರಿದ ನೂರಾರು ರೈತರು ಸರ್ಕಾರ ಹಾಗೂ ಕೆಐಎಡಿಬಿ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅಖಿಲ ಭಾರತ ರೈತ ಕಾರ್ಮಿಕ ಕೃಷಿ ಕಾರ್ಮಿಕ ಸಂಘಟನೆಗಳ ಜಿಲ್ಲಾ ಸಂಚಾಲಕ ಬಸವರಾಜ್ ಮಾತನಾಡಿ, ಯೂಟಿಲಿಟಿ ಉದ್ದೇಶಕ್ಕಾಗಿ ಭೂಮಿ ನೀಡಿದ ರೈತರಿಗೆ ಹಂಚಿಕೆಯಾಗಿರುವ ಕಾರ್ಖಾನೆಗಳು ಶೀಘ್ರದಲ್ಲೇ ಉದ್ಯೋಗ ನೀಡುವಂತೆ ಕ್ರಮ ವಹಿಸಬೇಕು. ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಿ, ಅವರಿಗೂ ಸಹ ಆದೇಶ ಪತ್ರ ನೀಡಬೇಕು. ಭೂಮಿ ಕಳೆದುಕೊಂಡ ರೈತರಿಗೆ ವಂಶಾಪರಾಂಪರ್ಯವಾಗಿ ಕಾಯಂ ಉದ್ಯೋಗ ನೀಡಬೇಕು. ಕಿರು ಉತ್ಪಾದನಾ ಘಟಕಗಳು, ಗೋದಾಮುಗಳು, ಶೈತ್ಯಾಗಾರಗಳಿಗೆ ಭೂಮಿ ನೀಡಿದ ರೈತರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸೂಕ್ತ ನಿಯಮ ರಚಿಸಬೇಕು. ಅವರಿಗೂ ಶೀಘ್ರ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಮತ್ತು ಕಾರ್ಖಾನೆಗಳ ನಡುವಿನ ಒಡಂಬಡಿಕೆಯಂತೆ, ಕಾರ್ಖಾನೆಗಳು ಉದ್ಯೋಗಗಳನ್ನು ಸೃಷ್ಟಿಸಬೇಕು. ಸ್ಥಳೀಯ ಯುವಕರಿಗೆ ಅವರ ಅರ್ಹತೆಗೆ ತಕ್ಕಂತೆ ಕಾಯಂ ಉದ್ಯೋಗವನ್ನು ನೀಡಬೇಕು. ಹೊರಗುತ್ತಿಗೆ ಕೆಲಸಗಳಲ್ಲಿಯೂ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಹಲವು ಕಾರ್ಖಾನೆಗಳು ಭೂಮಿ ಹಂಚಿಕೆಯಾಗಿ ಎಷ್ಟೋ ವರ್ಷಗಳದರೂ ಉತ್ಪಾದನೆ ಶುರು ಮಾಡುತ್ತಿಲ್ಲ. ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ ಹಾಗೂ ರೈತರಿಗೆ ನೆರವಾಗುವ ನಿಟ್ಟಿನಲ್ಲಿ, ಕಾರ್ಖಾನೆಗೆ ಜಾಗ ಮಂಜೂರಾದ ದಿನದಿಂದಲೇ ಭೂಮಿ ಕಳೆದುಕೊಂಡ ರೈತರಿಗೆ ಮಾಸಿಕ ವೇತನವನ್ನು ಅಥವಾ ಹಿಂಬಾಕಿ ವೇತನವನ್ನು ನೀಡುವ ನೀತಿ ರೂಪಿಸಬೇಕು ಒತ್ತಾಯಿಸಿದರು.

ರೈತರ ಬೇಡಿಕೆ ಈಡೇರುವವರೆಗೂ ನಾವು ಈಗ ಹಮ್ಮಿಕೊಂಡಿರುವ ಧರಣಿ ಕೈ ಬಿಡುವುದಿಲ್ಲ. ಹಾಗೆಯೇ ಬೇಡಿಕೆ ಈಡೇರದಿದ್ದಲ್ಲಿ ಕಾರ್ಖಾನೆಗಳಿಗೆ ಸರಬರಾಜು ಆಗುವ ನೀರನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಉಮೇಶ್, ರವಿ, ರಮೇಶ್, ಭರತ್, ಲಕ್ಷ್ಮೀ, ಚಿಕ್ಕತಾಯಮ್ಮ, ಹೂವಮ್ಮ, ಜಯಲಕ್ಷ್ಮಿ, ಚಿಕ್ಕ ಮಸನಮ್ಮ, ನಾಗರತ್ನ, ಮಂಗಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net