ಉಳ್ಳಾಲ: ಶುಕ್ರವಾರ ತಡೆಗೋಡೆ ಕುಸಿದು ಮೃತಪಟ್ಟ ಮಂಜನಾಡಿ ಮತ್ತು ಬೆಳ್ಮದಲ್ಲಿರುವ ಸಂತ್ರಸ್ತರ ಮನೆಗಳಿಗೆ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಶನಿವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬೆಲ್ಮ ಕಾನಕೆರೆ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ರವಿಕುಮಾರ್, ಮಾರನೆ ದಿನ ಮಗು ಶಾಲೆಗೆ ಹೋಗಬೇಕಿತ್ತು. ಹಿಂದಿನ ರಾತ್ರಿ ಮನೆಗೆ ಮಣ್ಣು ಬಿದ್ದು ಮಗು ಮೃತಪಟ್ಟಿದೆ. ಬಾಗಿಲು ತೆಗೆಯಲು ಆಗಿಲ್ಲ, ಮಗುವಿನ ಧ್ವನಿ ಬೇರೆಯವರಿಗೆ ಕೇಳಿಸಿದೆ. ದುರ್ದೈವ ಎಂದರೆ ಶಾಲೆಗೆ ಹೋಗಲು ಸಿದ್ಧವಾಗಿದ್ದ ಮಗು ಮೃತಪಟ್ಟಿರುವುದು. ಇಂಥ ಘಟನೆ ಯಾವ ಶತ್ರುವಿಗೂ ಬರಬಾರದು. ಸರ್ಕಾರ ಕೂಡಲೇ ಯಾವ ರೀತಿಯ ಪರಿಹಾರ ನೀಡಬಹುದು ಅದನ್ನು ನೀಡಬೇಕು. ಇನ್ನಿಬ್ಬರು ಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಸರ್ಕಾರ ಮಾಡಬೇಕು. ಕುಟುಂಬಕ್ಕೆ ನಾವೆಲ್ಲ ಶಕ್ತಿ ತುಂಬೋಣ ಎಂದರು.
ಮಂಜನಾಡಿ ಗ್ರಾಮದ ಕೊಪ್ಪಲ ಮಲಿಗೆ ಭೇಟಿ ನೀಡಿದ ಅವರು, ಇಲ್ಲಿ ಇಬ್ಬರು ಮಕ್ಕಳ ಸಹಿತ ಮೂವರು ತೀರಿಕೊಂಡಿದ್ದಾರೆ. ಅಶ್ವಿನಿಯ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಎರಡೂ ಕಾಲುಗಳನ್ನು ಶುಕ್ರವಾರವೇ ಕತ್ತರಿಸಿದ್ದು ನಾನು ನೋಡಿಕೊಂಡು ಬಂದಿದ್ದೇನೆ. ಅವರು ಪಪ್ಪ ಹೇಗಿದ್ದಾರೆ ಎಂದು ಕೇಳುತ್ತಿದ್ದರು. ಇಬ್ಬರು ಮಕ್ಕಳನ್ನು ಕೇಳುತ್ತಿದ್ದರು? ಆಕೆಗೆ ಪ್ರಜ್ಞೆ ಇದೆ, ಆದರೆ ದುಃಖದಲ್ಲಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮನೆಯ ಚಿತ್ರಣ ಗೊತ್ತಾಗಿ ಬದುಕುವುದು ಭೀಕರವಾಗಿದೆ. ಅವರಿಗೆ ಮನೆಯಿಲ್ಲ, ಇಬ್ಬರು ಮಕ್ಕಳು, ಅತ್ತೆ ಇಲ್ಲ. ಗಂಡ ದುಃಖದಲ್ಲಿದ್ದಾರೆ. ಮಾವನ ಪರಿಸ್ಥಿತಿ ಏನೆಂದು ಗೊತ್ತಿಲ್ಲ. ಆ ಮನೆಯನ್ನು ಬದುಕಿಸಬೇಕಾದರೆ ಮಾನವೀಯತೆ ದೃಷ್ಟಿಯಿಂದ ಸರ್ಕಾರಿ ನೌಕರಿ ಕೊಡಬೇಕು. ಐದು ಲಕ್ಷ ರೂ. ಕೊಟ್ಟರೆ ಎಷ್ಟು ದಿನ ಬರುತ್ತೆ? ಆಕೆ ಸಂಕಷ್ಟದಿಂದ ಹೊರಬರಲು ಸರ್ಕಾರಿ ನೌಕರಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಬಳಿ ಅಂಗಲಾಚಿ ಬೇಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಜಗದೀಶ್ ಆಳ್ವ ಕೂವೆತ್ತಬೈಲ್, ಜೀವನ್ ಕುಮಾರ್ ತೊಕ್ಕೊಟ್ಟು, ದಯಾನಂದ ತೊಕ್ಕೊಟ್ಟು ಇನ್ನಿತರರು ಉಪಸ್ಥಿತರಿದ್ದರು.