ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

Demand to fulfill various demands
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹುನಗುಂದ ಬಸ್ ಘಟಕ ಎದುರು ಪ್ರತಿಭಟನೆ ನಡೆಸಿದರು. ಕರವೇ ತಾಲೂಕು ಘಟಕದ ಅಧ್ಯಕ್ಷ ರೋಹಿತ ಬಾರಕೇರ, ಪ್ರಧಾನ ಕಾರ್ಯದರ್ಶಿ ಜಹೀರ ಸಂಗಮಕರ, ಉಪಾಧ್ಯಕ್ಷ ಹುಸೇನ ಸಂದಿಮನಿ ಇದ್ದರು.
Published on

ಹುನಗುಂದ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಬುಧವಾರ ಪಟ್ಟಣದ ಬಸ್ ಘಟಕ ಎದುರು ಪ್ರತಿಭಟನೆ ನಡೆಸಿದರು.

ಕರವೇ ಅಧ್ಯಕ್ಷ ರೋಹಿತ ಬಾರಕೇರ ಮಾತನಾಡಿ, ವಿಜಯಪುರ ವಿಭಾಗದ ಕೆಲವು ಸಾರಿಗೆ ಬಸ್‌ಗಳು ಹುನಗುಂದಕ್ಕೆ ಬರುತ್ತಿಲ್ಲ. ಹುನಗುಂದ ಬಸ್ ನಿಲ್ದಾಣದ ಒಳಗಡೆ ಬಾರದೆ ಬೈಪಾಸ್ ಹೋಗುತ್ತಿವೆ. ಪ್ರಯಾಣಿಕರನ್ನು ಬೈಪಾಸ್ ರಸ್ತೆಯಲ್ಲಿಯೇ ಇಳಿಸಿ ಹೋಗುತ್ತವೆ. ಬೇರೆ ಘಟಕದ ಬಸ್‌ಗಳಲ್ಲಿ ಹುನಗುಂದ ಮಾರ್ಗದ ಹೆಸರು ಸೇರಿಸಬೇಕು ಎಂದು ಆಗ್ರಹಿಸಿದರು.

ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ ಹಳೆಯ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್ ಮಾರ್ಗದ ಬೋರ್ಡ್‌ಗಳಲ್ಲಿ ಹುನಗುಂದ ಮಾರ್ಗದ ಹೆಸರನ್ನು ಸೇರಿಸಬೇಕು. ಸ್ತ್ರೀ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಪ್ರಯಾಣಕ್ಕೆ ತೊಂದರೆಯಾಗುತ್ತಿದ್ದು, ಅಂತಹ ಗ್ರಾಮಗಳಿಗೆ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಹುನಗುಂದ ಬಸ್ ಘಟಕ ಪ್ರಾರಂಭದಲ್ಲಿ 20 ಹೊಸ ಬಸ್‌ಗಳನ್ನು ನೀಡಬೇಕಿತ್ತು. ಆದರೆ, ಕೇವಲ 10 ಬಸ್‌ಗಳನ್ನು ನೀಡಿದ್ದಾರೆ. ಇನ್ನೂ 10 ಹೊಸ ಬಸ್‌ಗಳನ್ನು ನೀಡಬೇಕು. ಹುನಗುಂದ ಘಟಕದ ಹುಬ್ಬಳ್ಳಿ ಬಸ್‌ಗಳನ್ನು ಹುನಗುಂದ- ಹುಬ್ಬಳ್ಳಿ, ಹುಬ್ಬಳ್ಳಿ- ಹುನಗುಂದ ಎಂದು ಪರಿವರ್ತಿಸಬೇಕು. ಹುನಗುಂದ- ಬಾಗಲಕೋಟೆ- ಕಾಡಗಿಹಳ್ಳ- ರಾಯಚೂರ, ಬೀಳಗಿ-ಹುನಗುಂದ- ಕಾಡಗಿಹಳ್ಳ- ರಾಯಚೂರ, ಜಮಖಂಡಿ- ಹುನಗುಂದ -ಕಾಡಗಿಹಳ್ಳ- ರಾಯಚೂರಿಗೆ ಬಸ್ ಆರಂಭಿಸಬೇಕು. ಹುನಗುಂದ- ಗಜೇಂದ್ರಗಡ, ಕುಷ್ಟಗಿ- ಇಳಕಲ್ಲ, ಲಿಂಗಸುಗೂರು-ಇಳಕಲ್ಲ ಸಾರಿಗೆ ಬಸ್‌ಗಳನ್ನು ಹುನಗುಂದವರೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಹುನಗುಂದ- ಮುರ್ಡೇಶ್ವರ, ಹುನಗುಂದ- ಕಲಬುರ್ಗಿ, ಗೋವಾ- ಮಹಾರಾಷ್ಟ್ರಕ್ಕೆ ಹುನಗುಂದದಿಂದ ಅಂತಾರಾಜ್ಯ ಸಾರಿಗೆ ಬಸ್‌ಗಳನ್ನು ಓಡಿಸಬೇಕು. ಇಲ್ಲದಿದ್ದರೆ ಕರವೇ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರವೇ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜಹೀರ ಸಂಗಮಕರ, ಉಪಾಧ್ಯಕ್ಷ ಹುಸೇನ ಸಂದಿಮನಿ, ಇಳಕಲ್ಲ ನಗರ ಘಟಕದ ಅಧ್ಯಕ್ಷ ಅಶೋಕ ಪೂಜಾರಿ, ಮುತ್ತಣ್ಣ ಕಲ್ಮಡಿ, ನವೀದ ಸಂದಿಮನಿ, ನಜೀರ ಧನ್ನೂರ, ಪ್ರವೀಣ ವಾಲೀಕಾರ, ಬಸವರಾಜ ಇದ್ದಲಗಿ, ಶ್ರವಣ ಹಿರೇಮಠ, ರವಿ ಕೊಪ್ಪದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net