ಖಾಯಂ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹ

manavi
Published on

ಮಡಿಕೇರಿ: ವಸತಿ ಶಾಲೆಗಳ ಖಾಯಂ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರ ಸಂಘ, ಕೊಡಗು ಜಿಲ್ಲಾ ಘಟಕದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಲೋಕ್, ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧೀನದ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ರಾಜ್ಯಾದ್ಯಂತ ೮೨೧ ವಸತಿ ಶಾಲೆ/ಕಾಲೇಜುಗಳು ಕಾರ್ಯನಿರ್ವಹಿಸುತ್ತಿದೆ. ೨ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಸತಿಯುತ ಶಿಕ್ಷಣವನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ಪ.ಜಾತಿ, ಪ.ವರ್ಗ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ರಾಜ್ಯದ್ಯಂತ ಸುಮಾರು ೬೮೦೦ಕ್ಕಿಂತ ಅಧಿಕ ಖಾಯಂ ನೌಕರರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಪ್ರತಿ ವರ್ಷವೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವಸತಿ ಶಾಲೆ ವಿದ್ಯಾರ್ಥಿಗಳು ಮೇಲುಗೈ ಸಾಧಿಸುತ್ತಿದ್ದು ರಾಜ್ಯಮಟ್ಟದಲ್ಲಿ ಪ್ರಥಮ, ದ್ವಿತೀಯ ರ‌್ಯಾಂಕ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರ ಹಿಂದೆ ಸಿಬ್ಬಂದಿಗಳ ಅವಿರತ ಪರಿಶ್ರಮವಿದೆ ಎಂದು ವಿವರಿಸಿದರು.

ಖಾಯಂ ಬೋಧಕ-ಬೋಧಕೇತರ ಸಿಬ್ಬಂದಿಗಳ ಶ್ರಮದಿಂದ ಪ್ರತಿ ಭಾರಿ ಉತ್ತಮ ಫಲಿತಾಂಶ ಬರುತ್ತಿದ್ದು, ನವೋದಯ ವಿದ್ಯಾಲಯ ಮತ್ತು ಶಿಕ್ಷಣ ಇಲಾಖೆಯ ಶಾಲೆಗಳ ಸಿಬ್ಬಂದಿಗಳಿಗೆ ದೊರೆಯುವ ಹಲವು ಸೌಲಭ್ಯಗಳು ಕ್ರೈಸ್ ಖಾಯಂ ನೌಕರರಿಗೆ ಸಿಗುತ್ತಿಲ್ಲ. ಕೂಡಲೇ ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಅಥವಾ ಎಸ್ಸಿ-ಎಸ್ಟಿ, ಬಿಸಿ ವಸತಿ ಶಾಲೆಗಳನ್ನು ಸಿಬ್ಬಂದಿಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡಬೇಕು. ಖಾಯಂ ನೌಕರರಿಗೆ ಜ್ಯೋತಿ ಸಂಜೀವಿನಿ ಅನುಷ್ಟಾನಗೊಳಿಸಬೇಕು. ಮರಣ ಮತ್ತು ನಿವೃತ್ತಿ ಉಪಧಾನ ಸೌಲಭ್ಯ ಒದಗಿಸಬೇಕು. ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯತಿ ನೀಡಬೇಕು. ಖಾಯಂ ನೌಕರರಿಗೆ ಶೇ.೧೦ ವಿಶೇಷ ಭತ್ಯೆ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

ಇಂದು ಪ್ರತಿಭಟನೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೂ.೨ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸಂವಿಧಾನಾತ್ಮಕ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇದೇ ಸಂದರ್ಭ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚಿದಂಬರ, ಖಜಾಂಚಿ ಮೀನಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net