ರೈತರ ಬೇಡಿಕೆ ಈಡೇರಿಸಲು ಆಗ್ರಹ

22 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರೈತರ ಸಾಲ ಸಂರ್ಪೂಣ ಮನ್ನಾ ಸೇರಿ ವಿವಿಧ ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸಬೇಕು ಎಂದು ಶಿರೂರ ಗ್ರಾಮದ ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡ್ರ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಭರವಸೆಗಳ ಮಹಾಪೂರ ಹರಿಸಿದ್ದ ಜನಪ್ರತಿನಿಧಿಗಳು ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಕುರಿತು ಮಾತನಾಡುತ್ತಿಲ್ಲ. ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಅಧಿವೇಶನದಲ್ಲಿ ಅನಗತ್ಯ ಚರ್ಚೆ ಬದಲು ರೈತರ ವಿಷಯಗಳನ್ನು ಚರ್ಚಿಸಬೇಕು ಎಂದು ಒತ್ತಾಯಿಸಿದರು.
ರೈತರ ಸಂರ್ಪೂಣ ಸಾಲ ಮನ್ನಾ, ಬರ ಪರಿಹಾರ ವಂಚಿತ ರೈತರಿಗೆ ಹಣ ಜಮೆ ಮಾಡುವುದು, 2023ರ ಹಿಂಗಾರು ಬೆಳೆ ವಿಮೆ ತಕ್ಷಣ ಬಿಡುಗಡೆ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಶೇ. 1ರ ಬಡ್ಡಿ ದರದಲ್ಲಿ 10 ಲಕ್ಷ ರೂ.ವರೆಗೆ ಸಾಲ ನೀಡುವುದು, ಪ್ರತಿ ಕ್ವಿಂಟಲ್​ ಹೆಸರು ಬೆಳೆಗೆ 10000 ರೂ., ಗೋವಿನಜೋಳಕ್ಕೆ 5000 ರೂ., ಸೋಯಾಬಿನ್​ಗೆ 10000 ರೂ. ಸೇರಿ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಇದಲ್ಲದೆ ಸ್ಟಾಂಪ್​ ಡ್ಯೂಟಿ ದರ ಕಡಿಮೆ ಮಾಡುವುದು ಸೇರಿ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಬೇಡಿಕೆಗಳ ಕುರಿತು ಈಗಾಗಲೇ ಸಾಕಷ್ಟು ಬಾರಿ ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರು, ಸ್ಥಳಿಯ ನಾಯಕರಿಗೆ ಸಲ್ಲಿಸಲಾಗಿದೆ. ಆದಾಗ್ಯೂ ಯಾರೊಬ್ಬರೂ ಕ್ರಮಕ್ಕೆ ಮುಂದಾಗಿಲ್ಲ. ಇದೇ ಧೋರಣೆ ಮುಂದುವರೆದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net