

ಚಿಕ್ಕಮಗಳೂರು: ಕಾಫಿ ಉದ್ಯಮವನ್ನು ಸರ್ಫೇಸಿ-2002 (ಆರ್ಥಿಕ ಆಸ್ತಿಗಳ ಸ್ಥಿರೀಕರಣ, ಪುನಾರಚನೆ ಮತ್ತು ಭದ್ರತಾ ಹಿತಾಸಕ್ತಿ ಕಾಯ್ದೆ ಜಾರಿ) ಕಾಯ್ದೆಯಿಂದ ಮುಕ್ತಗೊಳಿಸುವ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕುರಿತು ಕರ್ನಾಟಕ ಬೆಳೆಗಾರರ ಒಕ್ಕೂಟ ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸರ್ಫೇಸಿ ಕಾಯ್ದೆ ಆಧರಿಸಿ ಇತ್ತೀಚೆಗೆ ನ್ಯಾಯಾಲಯದ ಆದೇಶ ಪಡೆದ ಯೂನಿಯನ್ ಬ್ಯಾಂಕ್ ಆಡಳಿತವು ರಮೇಶ್‍ರಾವ್ ಎಂಬುವವರಿಗೆ ಸೇರಿದ 208 ಎಕರೆ ಕಾಫಿ ತೋಟವನ್ನು ಹರಾಜು ಹಾಕಿದ ಪ್ರಕರಣ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪ್ರಸ್ತಾಪವಾಯಿತು.
ಈ ಆದೇಶದ ಆಧಾರದಲ್ಲಿ ಇತರ ಬ್ಯಾಂಕ್‍ಗಳು ಸಹ ಈಗ ಸಾಲ ಹೊಂದಿರುವ ಬೆಳೆಗಾರರಿಗೆ ನೋಟಿಸ್ ಜಾರಿ ಮಾಡಲು ಮುಂದಾಗುತ್ತಿವೆ. ಕೆಲವು ಬ್ಯಾಂಕ್‍ಗಳಂತೂ ಸರ್ಫೇಸಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿವೆ. ಬೆಳೆಗಾರರು ನಿರ್ಲಕ್ಷ್ಯ ತಾಳಿದಲ್ಲಿ ಮುಂದೊಂದು ದಿನ ಇಡೀ ಉದ್ಯಮಕ್ಕೆ ಮುಳುವಾಗಲಿದೆ ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ಕೇಳಿ ಬಂದವು.
ಸುಗ್ರೀವಾಜ್ಞೆ ಹೊರಡಿಸಲಿ:
ಕೇಂದ್ರದ ಹಣಕಾಸು ಸಚಿವಾಲಯ ಕಾಫಿಯನ್ನು ಕೃಷಿ ಎಂದು ಉಲ್ಲೇಖಿಸಿ ಸುಗ್ರೀವಾಜ್ಞೆ ಹೊರಡಿಸಿ ಕಾಫಿ ಉದ್ಯಮ ಸರ್ಫೇಸಿ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಸ್ಪಷ್ಟವಾಗಿ ಪ್ರಕಟಿಸಿದಲ್ಲಿ ಮಾತ್ರ ಈ ಸಮಸ್ಯೆಗಳಿಂದ ಹೊರ ಬರಲು ಸಾಧ್ಯ. ಈ ದಿಕ್ಕಿನಲ್ಲಿ ನಮ್ಮೆಲ್ಲರ ಹೋರಾಟ ನಡೆಯಬೇಕಿದೆ. ಇದರ ಜತೆಗೆ ಸಮುದಾಯದ ಹಿತದೃಷ್ಟಿಯಿಂದ ಒಕ್ಕೂಟ ಕೂಡ ನ್ಯಾಯಾಲಯದಲ್ಲಿ ಕಕ್ಷಿದಾರನಾಗಿ ಭಾಗಿಯಾಗಬೇಕಾಗುತ್ತದೆ. ರಾಜ್ಯ ಸರ್ಕಾರದ ಕಾನೂನು ಇಲಾಖೆಯಿಂದ ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಸಬೇಕಾಗುತ್ತದೆ. ಅಲ್ಲದೆ ಒಕ್ಕೂಟದಿಂದ ನೇರವಾಗಿ ಕೇಂದ್ರ ಹಣಕಾಸು ಇಲಾಖೆಗೆ ಪತ್ರ ಬರೆದು ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಂಘಟನೆಗಳು ಒಗ್ಗೂಡಬೇಕು:
ಸಭೆ ಅಧ್ಯಕ್ಷತೆ ವಹಿಸಿದ್ದ ಕೆಜಿಎಫ್ ಅಧ್ಯಕ್ಷ ಡಾ. ಎಚ್.ಟಿ.ಮೋಹನ್‍ಕುಮಾರ್ ಮಾತನಾಡಿ, ಕಾಫಿ ಉದ್ಯಮ ಆದಷ್ಟು ಬೇಗ ಸರ್ಫೇಸಿ ಕಾಯ್ದೆಯಿಂದ ಮುಕ್ತಗೊಳ್ಳಬೇಕಿದೆ. ಈ ಪ್ರಯತ್ನದಲ್ಲಿ ಉಪಾಸಿ, ಕೆಪಿಎ, ಸಿಪಿಎ ಮತ್ತಿತರ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಬೇಕು. ಹವಾಮಾನ ವೈಪರೀತ್ಯ, ಬೆಲೆ ಕುಸಿತ, ಕಾರ್ಮಿಕರ ಕೊರತೆ ಮತ್ತಿತರ ಸಮಸ್ಯೆಯಲ್ಲಿರುವ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬಹುತೇಕರು ಸಾಲ ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲ. ಈ ಸಂದರ್ಭದಲ್ಲಿ ಬ್ಯಾಂಕ್‍ಗಳು ಈ ಕಾಯ್ದೆಯನ್ನು ಅಸ್ತ್ರವಾಗಿ ಬಳಸಿಕೊಂಡು ದಬ್ಬಾಳಿಕೆಗೆ ಮುಂದಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕ್‍ನದು ತರಾತುರಿಯ ಕ್ರಮ:
ಕೆಜಿಎಫ್ ಸಂಘಟನಾ ಕಾರ್ಯದರ್ಶಿ ಕೆ.ಕೆ.ವಿಶ್ವನಾಥ್ ಮಾತನಾಡಿ, ಎಲ್ಲ ಪ್ರಕರಣಗಳಂತೆಯೇ ರಮೇಶ್‍ರಾವ್ ತೋಟ ಹರಾಜು ಕೂಡ ಒಂದು ಎಂದು ಭಾವಿಸಲಾಗಿತ್ತು. ಬ್ಯಾಂಕ್ ಈ ವಿಚಾರದಲ್ಲಿ ತರಾತುರಿಯ ಕ್ರಮ ತೆಗೆದುಕೊಂಡಿದೆ. ಅಷ್ಟಕ್ಕೂ ಹರಾಜು ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ಇದನ್ನು ಕೃಷಿ ಸಾಲ ಅಲ್ಲ ಎಂದು ಬ್ಯಾಂಕ್ ಹಾಗೂ ನ್ಯಾಯಾಲಯ ಪರಿಗಣಿಸಿರುವುದು ಗಮನಕ್ಕೆ ಬಂದಿದೆ. ನ್ಯಾಯಾಲಯದ ಆದೇಶ ಜಾರಿಗೊಳಿಸಲು ಮೂರು ತಿಂಗಳ ಕಾಲಾವಕಾಶವಿದ್ದರೂ ಅದಕ್ಕೆ ಅವಕಾಶ ನೀಡಿಲ್ಲವೇಕೆ ಎನ್ನುವುದಕ್ಕೆ ಉತ್ತರ ದೊರಕಿಲ್ಲ ಎಂದು ಹೇಳಿದರು. ಕಾಫಿಯು ಕೃಷಿ ಆಧಾರಿತ ಸಂಸ್ಕರಣಾ ಕೈಗಾರಿಕೆ. ಕಾಫಿ ತೋಟಕ್ಕೆ ಸಾಲ ಒದಗಿಸುವಾಗ ಬ್ಯಾಂಕ್‍ಗಳು ಕೃಷಿ ಉದ್ದೇಶಿತವೆಂದೇ ಪರಿಗಣಿಸುತ್ತವೆ. ಬ್ಯಾಂಕ್‍ಗಳ ಪ್ರಕಾರ ಇದು ಕೇವಲ ಕೈಗಾರಿಕೆ ಎನ್ನುವುದಾದರೆ ಕೆಎಸ್‍ಎಫ್‍ಸಿಯಂತಹ ಹಣಕಾಸು ಸಂಸ್ಥೆಗಳು ಕಾಫಿ ಉದ್ಯಮಕ್ಕೆ ಸಾಲ ನೀಡಬಾರದೇಕೆ ಎಂದು ಪ್ರಶ್ನಿಸಿದರು.
ಕೇಂದ್ರಕ್ಕೆ ನಿಯೋಗ ತೆರಳಬೇಕು:
ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜೈರಾಮ್ ಮಾತನಾಡಿ, ಬ್ಯಾಂಕ್‍ಗಳು ಸರ್ಫೇಸಿ ಕಾಯ್ದೆ ಬಳಸಿ ಕ್ರಮಕ್ಕೆ ಮುಂದಾದಲ್ಲಿ ಎಲ್ಲರೂ ಸಮಸ್ಯೆ ಅನುಭವಿಸಬೇಕಾಗುತ್ತದೆ. ಕಾಫಿ ಬೆಳೆಯುವ ಮೂರು ಜಿಲ್ಲೆಗಳಲ್ಲಿ 2 ರಿಂದ 3 ಸಾವಿರ ಬೆಳೆಗಾರರ ಖಾತೆಗಳು ಡಿಆರ್‍ಟಿ (ಡೆಬಿಟ್ ರಿಲೀಫ್ ಟ್ರಿಬ್ಯೂನಲ್) ಮುಂದಿವೆ. ಈ ಹಿನ್ನೆಲೆಯಲ್ಲಿ ಕಾಫಿಯನ್ನು ಕೃಷಿ ಎಂದು ಪರಿಗಣಿಸುವ ಕುರಿತು ಕಾನೂನಿನಲ್ಲಿ ತಿದ್ದುಪಡಿ ತರಲು ಪ್ರಯತ್ನಿಸಬೇಕು. ಇದಕ್ಕೆ ಪೂರಕವಾಗಿ 8-10 ಸಂಸದರ ಜತೆ ಕೇಂದ್ರ ವಿತ್ತ ಸಚಿವರ ಬಳಿಗೆ ನಿಯೋಗ ತೆರಳಿ ವಿಷಯ ಮನವರಿಕೆ ಮಾಡಬೇಕು ಎಂದು ಹೇಳಿದರು. ರಮೇಶ್‍ರಾವ್ ಪ್ರಕರಣಕ್ಕೂ ನಮಗೂ ಏನು ಸಂಬಂಧ ಎಂಬ ನಿರ್ಲಕ್ಷ್ಯ ಸಲ್ಲದು. ಇದಕ್ಕೆ ಪರಿಹಾರತ್ಮಕ ಪ್ರಯತ್ನ ನಡೆಯದಿದ್ದಲ್ಲಿ ಒಂದು ಲಕ್ಷ ರೂ.ಗಿಂತ ಹೆಚ್ಚಿನ ಬಾಕಿ ಇರುವವರೆಲ್ಲರಿಗೂ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಾಗೇನಾದರೂ ನಿರ್ಲಕ್ಷಿಸಿದಲ್ಲಿ ಮುಂದಿನ ಎರಡೇ ವರ್ಷದಲ್ಲಿ ಕಾಫಿ ಉದ್ಯಮ ಸಂಪೂರ್ಣವಾಗಿ ನಶಿಸಿಹೋಗಲಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದಲ್ಲದೆ ನಾವು ಕೂಡ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದರು.
ಪಿಐಎಲ್‍ಗೆ ತಜ್ಞರ ಜತೆ ಸಮಾಲೋಚಿಸಬೇಕು:
ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ ಸಲಹೆ ನೀಡಿ, ಕಾಫಿಯನ್ನು ಸರ್ಫೇಸಿ ಕಾಯ್ದೆಯಿಂದ ಮುಕ್ತಗೊಳಿಸುವ ಸಂಬಂಧ ಕಾನೂನು ಹೋರಾಟ ಕೈಗೊಳ್ಳಲು ಹಾಗೂ ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಕಾನೂನು ತಜ್ಞರ ಜತೆ ಸಮಾಲೋಚಿಸಿ ಒಗ್ಗಟ್ಟಿನ ಪ್ರಯತ್ನ ನಡೆಸಬೇಕು ಎಂದರು. ನೂರಾರು ವರ್ಷಗಳಿಂದ ಭಾವನಾತ್ಮಕ ಸಂಬಂಧ ಇರಿಸಿಕೊಂಡಿರುವ ತೋಟಗಳನ್ನು ಸರ್ಫೇಸಿ ಕಾಯ್ದೆ ಬಳಸಿ ಹರಾಜು ಹಾಕುವುದು ಸೂಕ್ತವಲ್ಲ. ಈ ವಿಚಾರದಲ್ಲಿ ಕಾನೂನು ಹೋರಾಟದ ಅಗತ್ಯವಿದೆ. ಹೀಗಿರುವಾಗ ಈ ಸಮಸ್ಯೆ ನನ್ನದಲ್ಲ ಎನ್ನುವ ನಿರ್ಲಕ್ಷ್ಯ ಬೇಡ. ಯಾವ ಬೆಳೆಗಾರರೂ ಇದುವರೆಗೆ ಬ್ಯಾಂಕ್‍ಗಳಿಗೆ ಮೋಸ ಮಾಡಿಲ್ಲ. ಸಂಸತ್ತಿನಲ್ಲಿ ಈ ವಿಚಾರ ಪ್ರಸ್ತಾಪಿಸಲು ಸಾಧ್ಯವಿದೆಯೇ ಎನ್ನುವ ಬಗ್ಗೆ ಪರಿಶೀಲಿಸಬೇಕು. ಈ ವಿಚಾರದಲ್ಲಿ ಕಾಫಿ ಮಂಡಳಿ ಸದಾ ಬೆಳೆಗಾರರ ಒಕ್ಕೂಟದ ಜತೆಗಿರಲಿದೆ. ಒಗ್ಗಟ್ಟಿನ ಹೋರಾಟ ಮಾಡಿ ಕಾಫಿ ಪೂರ್ಣ ಪ್ರಮಾಣದ ಕೃಷಿ ಎನ್ನುವುದನ್ನು ಸಾಬೀತು ಮಾಡೋಣ ಎಂದರು.
ಸರ್ಕಾರವೂ ಭಾಗೀದಾರನಾಗಬೇಕು:
ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಸಿದ್ದಾರ್ಥ ಮಾತನಾಡಿ, ಕಾನೂನು ಹೋರಾಟದಲ್ಲಿ ಬೆಳೆಗಾರರಷ್ಟೇ ಅರ್ಜಿದಾರರಾದರೆ ಸಾಲದು. ಕೇಂದ್ರ ಸರ್ಕಾರ ಸಹ ನ್ಯಾಯಾಲಯದಲ್ಲಿ ಭಾಗೀದಾರನಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು. ಕೆಲವೊಮ್ಮೆ ಇಂಥ ಪ್ರಯತ್ನ ನ್ಯಾಯಾಂಗ ನಿಂದನೆಗೆ ಒಳಗಾಗುವ ಸಾಧ್ಯತೆ ಕೂಡ ಇದೆ. ಈ ಎಲ್ಲವುಗಳ ಬಗ್ಗೆ ಕೂಲಂಕಷವಾಗಿ ಸಮಾಲೋಚಿಸಿ ತೀರ್ಮಾನಿಸಬೇಕು ಎಂದು ಸಲಹೆ ನೀಡಿದರು. ರಮೇಶ್‍ರಾವ್ ಪ್ರಕರಣದ ಆದೇಶ ಮುಂದೆ ಸಾರ್ವತ್ರಿಕವಾಗಿ ಅನ್ವಯಿಸುವ ಸಂಭವವಿದೆ. ಈಗಲೂ ವಿಚಾರ ಕೋರ್ಟ್ ಮುಂದೆಯೇ ಇದೆ ಎಂದರು. ಕೃಷಿ ವಲಯಕ್ಕೆ ಒದಗಿಸುತ್ತಿರುವ ಸವಲತ್ತುಗಳನ್ನು ಕಾಫಿಗೂ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಆದೇಶ ಮಾಡಿಸಿದರೆ ಬೇರೆ ಯಾವುದೇ ಪ್ರಯತ್ನಗಳ ಅಗತ್ಯವೇ ಇಲ್ಲ. ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯ ಸರ್ಕಾರಗಳಿಂದಲೂ ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆಸಿದರೆ ಇನ್ನೂ ಸೂಕ್ತ ಎಂದರು.
ಸಭೆಯ ನಿರ್ಣಯಗಳು:
ಕಾಫಿ ಉದ್ಯಮವನ್ನು ಸರ್ಫೇಸಿ ಕಾಯ್ದೆಯಿಂದ ಮುಕ್ತಗೊಳಿಸಲು ಕೇಂದ್ರದ ಮೇಲೆ ಒತ್ತಡ ತರುವುದು, ಕಾನೂನು ಹೋರಾಟದ ಸಂಬಂಧ ತಜ್ಞರ ಸಲಹೆ ಪಡೆದು ನಿರ್ಧರಿಸುವುದು, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಂದ ಕೇಂದ್ರಕ್ಕೆ ಪತ್ರ ಬರೆಸಲು ಪ್ರಯತ್ನಿಸುವುದು, ಸರ್ಫೇಸಿಯಂತಹ ಕಾಯ್ದೆಯಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳಲು ಬೆಳೆಗಾರರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕೆಜಿಎಫ್ ಉಪಾಧ್ಯಕ್ಷ ಎ.ಕೆ.ವಸಂತೇಗೌಡ, ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ಕೆಪಿಎ ಕಾರ್ಯದರ್ಶಿ ಅನಿಲ್ ಸವೂರ್, ಬೆಳೆಗಾರರಾದ ಟಿ.ಡಿ.ಮಲ್ಲೇಶ್, ಉತ್ತಮ್ ಗೌಡ, ಎಚ್.ಎನ್.ಶ್ರೀಧರ್ ಇತರರಿದ್ದರು.