

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿಯ ಮಹಿಳಾ ನಿಲಯದದಲ್ಲಿ ಅಭಿರಕ್ಷಣೆಗೆ ದಾಖಲಾದ ಯುವತಿಯರನ್ನು ಮೇಲಧಿಕಾರಿಗಳ ಅನುಮತಿ ಇಲ್ಲದೆ ಹೊರಗೆ ಕೆಲಸಕ್ಕೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿ ಬಜರಂಗ ದಳ ಧಾರವಾಡ ವಿಭಾಗದ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರಾಗಿರುವ ಈ ಸಂಸ್ಥೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸಲಾಗುತ್ತಿದೆ. ಅಂತರಧರ್ಮಿಯ ವಿವಾಹವಾಗಿ ಸಂಘರ್ಷಕ್ಕೊಳಪಟ್ಟು ದಾಖಲಾದ ಯುವತಿಯರಿಗೆ ಸಂಸ್ಥೆಯಲ್ಲಿ ರಕ್ಷಣೆ, ಆಹಾರ, ವೈದ್ಯಕಿಯ ನೆರವು ಮಾತ್ರ ನೀಡಬೇಕು. ಯುವತಿ ತಂದೆ-ತಾಯಿ ಅಲ್ಲದೆ ಅನ್ಯರ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ದೂರಿದರು.
ಸಂಸ್ಥೆಯಲ್ಲಿ ದಾಖಲಾದ ಯುವತಿಯರನ್ನು ಮೇಲಧಿಕಾರಿಗಳ ಆದೇಶವಿಲ್ಲದೆ ಕೆಲಸಕ್ಕೆ ಕಳುಹಿಸಿ ಅನ್ಯ ಧರ್ಮಿಯ ವ್ಯಕ್ತಿಗಳ ಜತೆಗೆ ಓಡಾಡಲು ಅವಕಾಶ ನೀಡಲಾಗುತ್ತಿದೆ. ಹೀಗೆ ಹೊರ ಹೋದ ಯುವತಿ ಸಂಸ್ಥೆಯಲ್ಲಿರುವ ಅವಧಿಯಲ್ಲೇ ವಿವಾಹ ನೋಂದಣಿ ಮಾಡಿಕೊಂಡು ಬಂದು ಸಂಸ್ಥೆಯಲ್ಲೇ ಇದ್ದಾಳೆ. ಈ ವಿವಾಹ ಪೊಲೀಸ್ ಠಾಣೆ ಮೇಲಿರಿದ್ದು, ಈಗ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂದು ದೂರಿದ್ದಾರೆ.
ನ್ಯಾಯಾಲಯ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಲ್ಲಿ ಯುವತಿಯರನ್ನು ಸಂಸ್ಥೆಯಿಂದ ಹೊರಗೆ ಕಳಿಸುವಾಗ ಯಾರ ಅನುಮತಿ ಪಡೆಯಲಾಗುತ್ತಿದೆ? ಗೊತ್ತಾಗುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧಾರವಾಡ ವಿಭಾಗ ಸಂಚಾಲಕ ಶಿವಾನಂದ ಸತ್ತಿಗೇರಿ, ಮಲ್ಲಿಕಾರ್ಜುನ ಸತ್ತಿಗೇರಿ, ಮಹೇಶ ಪಾಟೀಲ, ಅನುದೀಪ ಕುಲಕರ್ಣಿ, ಸಿದ್ದು ಹಿರೇಮಠ, ಗುರುಶಾಂತ ಹಿರೇಮಠ, ನಾಗರಾಜ ಗಾಣಗೇರ, ಇತರರು ಇದ್ದರು.