

ದೇವರಹಿಪ್ಪರಗಿ: ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ, ಅಂಕಲಗಿ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತರು ಶಿರಸ್ತೇದಾರ ಮಹಿಪತಿ ದೇಸಾಯಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕಿನ ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ, ಅಂಕಲಗಿ ಭಾಗದ ರೈತ ಪ್ರತಿನಿಧಿಗಳು ಮಂಗಳವಾರ ತಹಸೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿ ಕೆರೆಗಳಿಗೆ ನೀರು ಭರಿಸಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸದಯ್ಯನಮಠದ ವೀರಗಂಗಾಧರ ಶ್ರೀಗಳು ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಅಜೀಜ ಯಲಗಾರ ಮಾತನಾಡಿ, ತಾಲೂಕಿನ ಕೆಲವು ಭಾಗದಲ್ಲಿ ಮಳೆ ಇಲ್ಲದ ಕಾರಣ ಬರಗಾಲದ ಪರಿಸ್ಥಿತಿ ಆವರಿಸಿದೆ. ಈಗ ಜನ, ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಈ ಕುರಿತು ಆಲಮಟ್ಟಿ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಹಲವು ಬಾರಿ ದೂರವಾಣಿ ಮೂಲಕ ನೀರು ಹರಿಸಲು ವಿನಂತಿಸಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ನೆರೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕಾಲುವೆ ಸೇರಿದಂತೆ ಹಳ್ಳಗಳಲ್ಲಿ ಸಾಕಷ್ಟು ನೀರು ಹರಿಯುತ್ತಿದೆ. ಆದರೆ ನಮ್ಮ ತಾಲೂಕಿನ ಕಾಲುವೆಗಳಿಗೆ ನೆಪ ಮಾತ್ರಕ್ಕೆ ನೀರು ಹರಿಸಿ ಈಗ ನಿಲ್ಲಿಸಲಾಗಿದೆ ಎಂದರು.
ಕಡ್ಲೇವಾಡ ಪಿಸಿಎಚ್ ಕೆರೆ ತಾಲೂಕಿನ ದೊಡ್ಡ ಕೆರೆಯಾಗಿದ್ದು ಈವರೆಗೆ ಒಂದು ಬಾರಿಯೂ ಪೂರ್ಣವಾಗಿ ತುಂಬಿಲ್ಲ. ಕೂಡಲೇ ಕಾಲುವೆ ಮೂಲಕ ನೀರು ಹರಿಸಿ ಕೆರೆಗಳನ್ನು ತುಂಬಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸೆ. 15ರಂದು ಎತ್ತು, ಚಕ್ಕಡಿಗಳೊಂದಿಗೆ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಧರಣಿ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಸಾಹೇಬಗೌಡ ರೆಡ್ಡಿ, ಶಿವಶಂಕರ ರೂಗಿ, ಪ್ರಭು ಸೂಳಿಭಾವಿ, ಮಲ್ಲಿಕಾರ್ಜುನಗೌಡ ಬಿರಾದಾರ, ರವಿ ಬಿರಾದಾರ, ಪಿಂಟೂ ಭಾಸುತ್ಕರ್, ಬಸನಗೌಡ ಬಿರಾದಾರ, ಗುತ್ತೇಪ್ಪ ಕೊಟ್ನಾಳ, ಸುರೇಶ ಪೂಜಾರಿ, ಮಹಾಂತೇಶ ಪೂಜಾರಿ, ಮಹಾದೇವ ತಡಲಗಿ, ಎಂ.ಎಂ. ಕಬಾಡಗಿ, ರವಿ ಚೌಧರಿ, ಮುತ್ತು ಸಂಗೋಗಿ, ಮಾದೇವಪ್ಪ ನಾಟೀಕಾರ, ಬಿ.ಸಿ. ಮಂಗಳೂರ, ಎಸ್.ಆರ್. ಬಿರಾದಾರ ಇತರರಿದ್ದರು.