ಸಚಿತಾ ರೈ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಆಗ್ರಹ

Published on

ಕಾಸರಗೋಡು: ಉದ್ಯೋಗ ಭರವಸೆ ನೀಡಿ ಪುತ್ರಿಯಿಂದ 12.70ಲಕ್ಷ ರೂ. ಪಡೆದು ವಂಚಿಸಿರುವುದರಿಂದ ಖಿನ್ನತೆಗೊಳಗಾಗಿ ಮಹಿಳೆ ನೇಣಿಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸಚಿತಾ ರೈ ವಿರುದ್ಧ ಕೇಸು ದಾಖಲಿಸುವಂತೆ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಎಂ.ಎಲ್.ಅಶ್ವಿನಿ ಆಗ್ರಹಿಸಿದ್ದಾರೆ.

ಸರೋಜಿನಿ-ಅರವಿಂದಾಕ್ಷನ್ ದಂಪತಿ ಪುತ್ರಿ ಅಮೃತಾ ಅವರಿಂದ ಡಿವೈಎಫ್‌ಐ ಮಾಜಿ ನಾಯಕಿ ಸಚಿತಾ ರೈ ಸಿಪಿಸಿಆರ್‌ಐನಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ 12.70ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಬದಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪುತ್ರಿಗೆ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸರೋಜಿನಿ ತಮ್ಮ ಚಿನ್ನಾಭರಣ ಅಡವಿರಿಸಿ ಹಣ ತೆಗೆದುಕೊಟ್ಟಿದ್ದಾರೆನ್ನಲಾಗಿದೆ. ಈ ಹಣ ವಾಪಾಸು ಕೈಸೇರದೆ, ಉದ್ಯೋಗವೂ ಲಭಿಸದಿರುವುದರಿಂದ ಸರೋಜಿನಿ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದ ಸಚಿತಾ ರೈ ವಿರುದ್ಧ ಆತ್ಮಹತ್ಯೆ ಪ್ರೇರಣೆಗೆ ಸಂಬಂಧಿಸಿ ಕೇಸು ದಾಖಲಿಸಬೇಕು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ನೇತಾರರ ಪರೋಕ್ಷ ಬೆಂಬಲವೇ ಸಚಿತಾಳ ವಂಚನಾ ಕೃತ್ಯಗಳಿಗೆ ಪ್ರೇರಣೆಯಾಗಿರುವುದಾಗಿಯೂ ಎಂ.ಎಲ್ ಅಶ್ವಿನಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net