

ಮಂಡ್ಯ: ರಾಜ್ಯ ಸರ್ಕಾರ ನಗರ ಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಬಹು ವರ್ಷದಿಂದ ಅನಧಿಕೃತ ನಿವೇಶನಗಳಲ್ಲಿ ವಾಸಿಸುತ್ತಿರುವ ಜನರ ಮೂಲ ಸೌಲಭ್ಯ ಮತ್ತು ದಾಖಲಾತಿ ಕಲ್ಪಿಸುವ ನಿಟ್ಟಿನಲ್ಲಿ ಬಿ-ಖಾತೆ ವಿತರಣಾ ಕ್ರಮ ವಹಿಸಿದೆ. ಆದರೆ ಇದಕ್ಕೆಂದು ನೀಡಲಾಗಿರುವ ಅವಧಿಯನ್ನು ವಿಸ್ತರಣೆ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಎಂ.ಎಲ್.ತುಳಸೀಧರ್ ಮನವಿ ಮಾಡಿದ್ದಾರೆ.
ಬಿ ಖಾತೆ ವಿತರಣೆಗೆ ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ. ಆದರೆ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಆಸ್ತಿಯ ದಾಖಲಾತಿ ಒದಗಿಸಲು ಸ್ವಲ್ಪ ಕಷ್ಟಕರವಾಗಿದ್ದು, ಇದುವರೆಗೂ ರಾಜ್ಯದಲ್ಲಿ ಶೇ.50 ರಿಂದ 60ರಷ್ಟು ಪ್ರಕ್ರಿಯೆ ಆಗಿರಬಹುದು. ನೀಡಿರುವ ಗಡುವು ಮೇ 10ಕ್ಕೆ ಮುಗಿಯುತ್ತಿದ್ದು, ಈ ಸಮಯದೊಳಗೆ ಬಿ ಖಾತೆ ಮಾಡಿಕೊಳ್ಳಲಾಗುವುದಿಲ್ಲ. ಆದ್ದರಿಂದ ಹೆಚ್ಚುವರಿ ಅವಕಾಶ ನೀಡಬೇಕು. ಇದರಿಂದ ಸ್ಥಳೀಯ ಸಂಸ್ಥೆಗೆ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಾಗಲಿದ್ದು, ಸಾರ್ವಜನಿಕರಿಗೆ ಮೂಲ ಸೌಲಭ್ಯಗಳು ಮತ್ತು ಸೇವೆಗಳ ಅನುಷ್ಠಾನಕ್ಕೆ ಸಹಕಾರಿಯಾಗಬಹುದೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.