

ಹುಬ್ಬಳ್ಳಿ: ತಾರಿಹಾಳ ಗ್ರಾಮದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಜಗಳ ತೆಗೆದು ಹಿಂದುಗಳ ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದ ಅನ್ಯ ಕೋಮಿನವರ ಮೇಲೆ ಗೂಂಡಾ ಕಾಯ್ದೆ ದಾಖಲಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು, ನಗರದ ಹುಬ್ಬಳ್ಳಿ ಗ್ರಾಮೀಣ ಠಾಣೆ ಡಿವೈಎಸ್‌ಪಿ ವಿನೋದ ಮುಕ್ತೇದಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ಪ್ರಕರಣ ನೋಡಿದರೆ ಮಂಗಳೂರು, ಹಳೆ ಹುಬ್ಬಳ್ಳಿ ಘಟನೆ ಮರುಕಳಿದಂತಿದೆ. ಹಿಂದುಗಳು ವ್ಯಾಪಾರ ಮಾಡಬಾರದು ಎಂಬ ಮನೋಭಾವ ಮೂಡಿದಂತಿದೆ. ಬರೀ ಬೈಕ್ ತೆಗೆಯುವ ವಿಚಾರಕ್ಕೆ ಜಗಳ ಮಾಡಿ, ಹಲ್ಲೆ ಮಾಡಿದ್ದಾರೆ. ಏನೂ ತಪ್ಪು ಇಲ್ಲದ ತಂದೆ, ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಇವರ ಮೇಲೆ ಗೂಂಡಾ ಕಾಯ್ದೆ ದಾಖಲಿಸಬೇಕು. ಈ ಘಟನೆ ಖಂಡನೀಯ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ಸ್ವೀಕರಿಸಿದ ಮುಕ್ತೇದಾರ, ಹಿರಿಯ ಅಧಿಕಾರಿಗಳಿಗೆ ರವಾನಿಸುವುದಾಗಿ ಭರವಸೆ ನೀಡಿದರು.
ಬಜರಂಗ ದಳ ಧಾರವಾಡ ವಿಭಾಗ ಸಂಯೋಜಕ ಶಿವಾನಂದ ಸತ್ತಿಗೇರಿ, ಜಿಲ್ಲಾ ಸಂಚಾಲಕ ಸಿದ್ದು ಹಿರೇಮಠ, ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ರಮೇಶ ಕದಂ, ಧಾರವಾಡ ಜಿಲ್ಲಾ ಕಾರ್ಯದರ್ಶಿ ಅನದೀಪ ಕುಲಕರ್ಣಿ, ಪ್ರಮುಖರಾದ ಮಂಜುನಾಥ ಮಕ್ಕಳಗೇರಿ, ಗುರುಶಾಂತ ಹಿರೇಮಠ, ಪ್ರಶಾಂತ ನರಗುಂದ ಇತರರು ಇದ್ದರು.