ನಾಲೆಗಳಿಗೆ ನೀರು ಹರಿಸಲು ಆಗ್ರಹ

5 mlv 1
ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಬಳಿ ಇರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು. ಭರತ್‌ರಾಜ್, ಎಂ.ವಿ.ಕೃಷ್ಣ, ಸತೀಶ್, ವಿಜೇಂದ್ರ ಇತರರು ಇದ್ದರು.
Published on

ಮಳವಳ್ಳಿ: ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ನೀರು ತುಂಬಿ ಹರಿಯುತ್ತಿದ್ದರೂ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿರುವುದು ಅಧಿಕಾರಿಗಳ ಹೊಣೆಗೇಡಿತನ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅದ್ಯಕ್ಷ ಎನ್.ಎಲ್.ಭರತ್‌ರಾಜ್ ಆರೋಪಿಸಿದ್ದಾರೆ.

ತಾಲೂಕಿನ ಕಾಗೇಪುರದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ರೈತರ ಬೆಳೆಗಳಿಗೆ ಮತ್ತು ಕೆರೆ ಕಟ್ಟೆಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿ ಸೋಮವಾರ ರೈತರು ನಡೆಸುತ್ತಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ಜಿಲ್ಲೆಯ ರೈತರ ಪ್ರಸ್ತುತ ಸ್ಥಿತಿ ಹೇಗಾಗಿದೆ ಎಂದರೆ ಸಮುದ್ರದ ನಂಟು ಉಪ್ಪಿಗೆ ಬರ ಅನ್ನೊ ಗಾದೆಯಂತಾಗಿದೆ. ಕಬಿನಿ, ಹಾರಂಗಿ, ಹೇಮಾವತಿ, ಕೆಆರ್‌ಎಸ್ ಅಣೆಕಟ್ಟುಗಳು ಭರ್ತಿಯಾಗಿ ಪ್ರವಾಹ ಉಂಟಾಗಿ ನದಿ ಪಾತ್ರದ ಹಳ್ಳಿಗಳು, ಬೆಳೆಗಳು ಜಲಾವೃತಗೊಂಡು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ತಾಲೂಕಿನ ರೈತರ ಬೆಳೆಗಳಿಗೆ ಹಾಗೂ ಕೆರೆ-ಕಟ್ಟೆ ತುಂಬಿಸುವಲ್ಲಿ ನೀರು ಬಿಡುವ ವಿಚಾರದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‌ಎಸ್‌ನಲ್ಲಿ 80 ರಿಂದ 90 ಅಡಿ ನೀರು ತುಂಬಿದಾಗಲೇ ಬೆಳೆ ಮತ್ತು ಕೆರೆಕಟ್ಟೆಗಳಿಗೆ ನೀರು ಬಿಡಲಾಗಿತ್ತು. ಇವರ ಅವೈಜ್ಞಾನಿಕ ನೀತಿಯಿಂದಾಗಿ ಕೆರೆಕಟ್ಟೆ ಹಾಗೂ ರೈತರ ಬೆಳೆಗಳಿಗೂ ನೀರಿಲ್ಲದಂತಾಗಿದೆ. ಸರಿಯಾದ ಸಮಯಕ್ಕೆ ಭತ್ತದ ಒಟ್ಟಲು ಹಾಕಲು ನೀರಿಲ್ಲದ ಕಾರಣ ನಾಟಿ ಮಾಡಲು ವ್ಯತ್ಯಾಸವಾಗಿ ಇಳುವರಿ ಕಡಿಮೆಯಾಗುವ ಮೂಲಕ ಅನ್ನದಾತರು ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ. ತಕ್ಷಣ ಕಾಲುವೆಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿದರು.

ಕಿರಿಯ ಎಂಜಿನಿಯರ್ ಸರಿಯಾಗಿ ಕರ್ತವ್ಯ ನಿರ್ವಹಿಸುಲ್ಲ. ಹಿಂದೆ ಅಧಿಕಾರಿಗಳು ನಾಲೆಗಳ ಮೇಲೆ ಹಗಲು,ರಾತ್ರಿ ಗಸ್ತು ತಿರುಗುತ್ತಿದ್ದರು. ಈಗ ಯಾರೂ ನಾಲೆ ಮೇಲೆ ಬರುತ್ತಿಲ್ಲ. ಕಾಲುವೆಗಳ ಒತ್ತುವರಿ ಅಥವಾ ಒಡೆದು ಹೋಗಿದ್ದರೂ ನೋಡುವುದಿಲ್ಲ ಎಂದು ದೂರಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಇಇ ಭರತೇಶ್ ರೈತರ ಸಮಸ್ಯೆಗಳನ್ನು ಆಲಿಸಿದರು. ಈ ದಿನವೇ ಕಾಲುವೆಗಳಿಗೆ ನೀರು ಬಿಡುವ ಭರವಸೆ ನೀಡಿ, ರೈತರ ಮನವೊಲಿಸಿದರು.

ಪ್ರತಿಭಟನೆಯಲ್ಲಿ ಎಂ.ವಿ.ಕೃಷ್ಣ, ಸತೀಶ್, ವಿಜೇಂದ್ರ, ಹೇಮಂತ್, ನಾಗೇಂದ್ರ ಬೋರೇಗೌಡ, ಕೃಷ್ಣೇಗೌಡ, ಮರಿಲಿಂಗೇಗೌಡ, ಸುಬ್ಬೇಗೌಡ, ಚೆನ್ನಿಗರಾಮ, ಆನಂದ್ ಪ್ರಸನ್ನ, ಪ್ರಶಾಂತ್, ಗುಳಗಟ್ಟ, ನೆಲಮಾಕನಹಳ್ಳಿ, ಹೊಂಬೆಗೌಡನದೊಡ್ಡಿ, ಕಂದೇಗಾಲ, ಅಂಚೇದೊಡ್ಡಿ, ತಮ್ಮಡಹಳ್ಳಿ, ನೆಲ್ಲೂರು, ತಳಗವಾದಿ, ಕೋರೆಗಾಲ, ಮಾದಳ್ಳಿ ಗ್ರಾಮಗಳ ರೈತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net