ನಾಲೆಗೆ ನೀರು ಹರಿಸುವಂತೆ ಆಗ್ರಹ

7-pnp 1
ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಪಾಂಡವಪುರ ಪಟ್ಟಣದ ನೀರಾವರಿ ನಿಗಮದ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಎಚ್.ಎನ್. ಮಂಜುನಾಥ್, ದೊರೆಸ್ವಾಮಿ, ವಿಷ್ಣು ವಿಠಲ ಇತರರು ಇದ್ದರು.
Published on

ಪಾಂಡವಪುರ: ವಿಶ್ವೇಶ್ವರಯ್ಯ ನಾಲಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿರುವ ಬೆಳೆಗಳು ಒಣಗುತ್ತಿದ್ದು, ತಕ್ಷಣ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಕಾವೇರಿ ನೀರಾವರಿ ನಿಗಮ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಮುತ್ತಿಗೆ ಹಾಕಿದ ರೈತರು, ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ನೀರಾವರಿ ಇಲಾಖೆ ಅಧಿಕಾರಿಗಳು ನಾಲಾ ಅಧುನೀಕರಣ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರ ಮತ್ತು ನಿಗಮದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರು ತಾವು ಬೆಳೆದ ಬೆಳೆ ಕೈಗೆ ಸಿಗುತ್ತದೆ ಎಂಬ ಆಶಾಭಾವನೆಯಿಂದ ಲಕ್ಷಾಂತರ ರೂ. ಸಾಲ ಮಾಡಿ ವ್ಯವಸಾಯ ಮಾಡಿದ್ದಾರೆ. ತಕ್ಷಣಕ್ಕೆ ನಾಲೆಗಳಲ್ಲಿ ನೀರು ಹರಿಯದಿದ್ದರೆ ಬೆಳೆ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಲ್ಲಿ ರೈತರು ತೋಳಲಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಗುತ್ತಿಗೆದಾರನಿಗೆ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ನಾಲೆಗೆ ನೀರು ಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿ ನದಿಗೆ ನೀರನ್ನು ಹರಿಸಲಾಗುತ್ತಿದೆ. ದೀಪದ ಬುಡ ಕತ್ತಲು ಎಂಬಂತೆ ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರಿದ್ದರು ನಾಳೆಗೆ ನೀರು ಹರಿಸಿ ರೈತರನ್ನು ಉಳಿಸುವ ಕೆಲಸ ಅಧಿಕಾರಿಗಳಿಂದ ಆಗುತ್ತಿಲ್ಲ. ಇದರಿಂದ ಅಧಿಕಾರಿಗಳು ಗುತ್ತಿಗೆದಾರನ ಪ್ರಭಾವಕ್ಕೆ ಕಟ್ಟುಬಿದ್ದು ನಾಲೆಗೆ ನೀರು ಹರಿಸುತ್ತಿಲ್ಲ ಎಂಬ ಮಾತು ಸತ್ಯವಾಗುತ್ತಿದೆ. ವಿಶ್ವೇಶ್ವರಯ್ಯ ನಾಲಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಕಬ್ಬು ಹಾಗೂ ಇನ್ನಿತರ ಬೆಳೆ ಬೆಳೆಗಳಿಗಾಗಿ ರೈತರು 2 ಸಾವಿರ ಕೋಟಿ ರೂ.ಗೂ ಅಧಿಕ ಬಂಡವಾಳ ಹೂಡಿದ್ದಾರೆ. ಗುತ್ತಿಗೆದಾರನಿಗೆ ಒಂದೆರಡು ಕೋಟಿ ರು. ನಷ್ಟವಾಗುತ್ತದೆ ಎಂದು ನಾಲೆಗಳಿಗೆ ನೀರು ಹರಿಸುತ್ತಿಲ್ಲ. ಒಬ್ಬ ಗುತ್ತಿಗೆದಾರನಿಗೆ ನಷ್ಟವಾಗುವುದನ್ನು ತಪ್ಪಿಸುವುದಕ್ಕಾಗಿ ಅಧಿಕಾರಿಗಳು ರೈತರ ಬದುಕನ್ನು ಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸುತ್ತಾರೆ ಎಂದು ರೈತರು ತಾಳ್ಮೆಯಿಂದ ಕಾಯುತ್ತಿದ್ದಾರೆ. ನೀರಾವರಿ ನಿಗಮದ ಅಧಿಕಾರಿಗಳ ವರ್ತನೆ ಹೀಗೆ ಮುಂದುವರೆದರೆ ತಾಲೂಕಿನ ರೈತರೊಂದಿಗೆ ಉಗ್ರ ಪ್ರತಿಭಟನೆ ಮಾಡಲಾಗುವುದು. ಸಾಲ ಮಾಡಿ ವ್ಯವಸಾಯ ಮಾಡುತ್ತಿರುವ ರೈತರು ಆತ್ಮಹತ್ಯೆ ಮತ್ತು ಹೃದಯಾಘಾತಕ್ಕೆ ಒಳಗಾಗಬಾರದು ಎಂದರೆ ತಕ್ಷಣ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ತಕ್ಷಣ ನೀರು ಹರಿಸಬೇಕು. ವಿಸಿ ನಾಲೆಗೆ ಕನಿಷ್ಠ ಒಂದು ಸಾವಿರ ಕ್ಯೂಸೆಕ್ ನೀರು ಹರಿಸಬೇಕು. ಇಲ್ಲವಾದರೆ ಪಾಂಡವಪುರ ಪಟ್ಟಣದ ರಾಜ್‌ಕುಮಾರ್ ವೃತ್ತ ಮತ್ತು ನಿಗಮದ ಕಚೇರಿ ಮುಂದೆ ಏಕ ಕಾಲಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಾವೇರಿ ನೀರಾವರಿ ನಿಗಮದ ಇಇ ತಮ್ಮಣ್ಣಗೌಡ ಪ್ರತಿಭಟನಾಕಾರರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಪ್ರಗತಿಯಲ್ಲಿದ್ದ ನಾಲೆ ಆಧುನೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ರಾತ್ರಿ ನಾಲೆಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.

ಈ ವೇಳೆ ಹೋರಾಟಗಾರ ಹಾರೋಹಳ್ಳಿ ನಾರಾಯಣಗೌಡ, ಹಿರೇಮರಳಿ ದೊರೆಸ್ವಾಮಿ, ಕೃಷ್ಣೇಗೌಡ, ಶ್ರೀನಿವಾಸ್, ವಿಷ್ಣು ವಿಠಲ, ಎಲೆಕೆರೆ ಪ್ರಸನ್ನ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net