ಬರ ಪರಿಹಾರ ವಿತರಿಸಲು ಆಗ್ರಹ

15sep-3-nmt-raita pratibhatane-news-photo
Published on

ನ್ಯಾಮತಿ: ತಾಲೂಕಾದ್ಯಂತ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದು, ಪ್ರತಿ ಎಕರೆಗೆ ರೂ.25 ಸಾವಿರದಿಂದ 30 ಸಾವಿರ ಬರ ಪರಿಹಾರ ನೀಡುವುದು, ಬೆಳೆವಿಮೆ ಹಣವನ್ನು ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್‌ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಉಪತಹಸೀಲ್ದಾರ್ ಕೆಂಚಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ಉಮೇಶ್ ಬೆಳಗುತ್ತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನ್ನದಾತನನ್ನು ಕಡೆಗಣಿಸಿ ಕೆಲಸಕ್ಕೆ ಬಾರದ ಯೋಜನೆಗಳನ್ನು ತಂದು ಅನ್ನದಾತನಿಗೆ ಕಣ್ಣೀರೊರೆಸುವ ತಂತ್ರ ನಡೆಸಿದೆ. ರೈತರ ಬಗ್ಗೆ ಸರ್ಕಾರ ಭವಿಷ್ಯದ ಚಿಂತನೆ ಮಾಡದೆ ಕಡೆಗಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹನುಮಸಾಗರ ಏತ ನೀರಾವರಿ ಕಾಮಗಾರಿ ಪೂರ್ಣವಾಗಿದ್ದು, ಅವಳಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿದರೆ ರೈತರ ಬದುಕಿಗೆ ಅನುಕೂಲವಾಗಲಿದೆ. ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಪ್ರಮುಖ ಕೆ.ಜಿ.ಬಸಪ್ಪ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸುಂಕದಕಟ್ಟೆ ಕರಿಬಸಪ್ಪ ಮಾತನಾಡಿದರು. ತಾಲೂಕು ಗೌರವಾಧ್ಯಕ್ಷ ಗೋಪಾಲಪ್ಪ, ಉಪಾಧ್ಯಕ್ಷ ಪಿ ಚನ್ನೇಶಪ್ಪ, ಹೊಸಮನೆ ಮಲ್ಲಿಕಾರ್ಜುನ ಕುಂಬಾರ, ಬೆಳಗುತ್ತಿ ನಾಗರಾಜ್, ರುದ್ರೇಶಪ್ಪ, ಶುಭಾಷ್ ರೆಡ್ಡಿ, ಆರುಂಡಿ ನಾಗರಾಜ್, ಹನುಮಂತ ನಾಯ್ಕ, ಕರಿಬಸಪ್ಪ ಹೊಳೆಹರಳಹಳ್ಳಿ, ಬಸವರಾಜಪ್ಪ ಬಣಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net