ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಆಗ್ರಹ

HUN-SEP-14-5(DSS MEMORENDUM)
ಹುಣಸೂರು ನಗರವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮತ್ತು ಥರ್ಮಾಕೋಲ್‌ಗಳ ಬಳಕೆ ನಿಷೇಧಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಿಂಗರಾಜ ಮಲ್ಲಾಡಿ, ಸತೀಶ್‌ಕುಮಾರ್, ಬಲ್ಲೇನಹಳ್ಳಿ ಕೆಂಪರಾಜು, ಪಾರ್ವತಿ, ಶೋಭಮ್ಮ ಇತರರಿದ್ದಾರೆ.
Published on

ಹುಣಸೂರು: ಹುಣಸೂರು ನಗರದಲ್ಲಿ ಫಾಸ್ಟ್ ಫುಡ್, ಪಾನಿಪೂರಿ, ಗೋಬಿ ಸೆಂಟರ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕೂಡಲೇ ನಿಷೇಧಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ನಗರಸಭೆ ವ್ಯಾಪ್ತಿಗೆ ಒಳಪಡುವ ರಸ್ತೆ ಬದಿಗಳಲ್ಲಿ, ನಗರಸಭಾ ಮೈದಾನ, ಪ್ರಮುಖ ವೃತ್ತಗಳಲ್ಲಿ ಯಥೇಚ್ಛವಾಗಿ ಫಾಸ್ಟ್ ಫುಡ್ , ಪಾನಿಪೂರಿ, ಗೋಬಿ ಸೆಂಟರ್‌ಗಳು ನಡೆಯುತ್ತಿದ್ದು, ಈ ಸೆಂಟರ್‌ಗಳಲ್ಲಿ ಪ್ಲಾಸ್ಟಿಕ್ ಹಾಗೂ ಥರ್ಮಾಕೋಲ್ ಬಳಕೆ ಮಾಡಲಾಗುತ್ತಿದೆ. ಸಾರ್ವಜನಿಕರು, ಮಹಿಳೆಯರು, ಶಾಲಾ ಮಕ್ಕಳು ಈ ಫಾಸ್ಟ್‌ಫುಡ್‌ಗಳ ಆಹಾರಕ್ಕೆ ಮೊರೆ ಹೋಗಿ ಪ್ಲಾಸ್ಟಿಕ್ ಬಳಕೆಯಿಂದಾಗಿ ಅನೇಕ ರೋಗರುಜಿನಗಳಿಗೆ ಕಾರಣವಾಗುತ್ತಿದೆ. ಸಣ್ಣಪುಟ್ಟ ಜ್ವರ ತಲೆನೋವು ಬಂದರೂ ಸ್ವಲ್ಪದರಲ್ಲೇ ವಾಸಿಯಾಗದೆ ಬಹುದಿನಗಳವರೆಗೂ ಕಾಡುವಂತಹ ಪರಿಸ್ಥಿತಿ ಇದೆ. ಈ ಸೆಂಟರ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಒಂದೆಡೆಯಾದರೆ, ಬೀದಿ ಬದಿಯಲ್ಲಿರುವ ಕಸಕಡ್ಡಿಗಳು ಆಹಾರದ ಮೇಲೆ ಬಿದ್ದು ಶುಚಿತ್ವವಿಲ್ಲದೆ ಆರೋಗ್ಯ ಹದಗೆಡುತ್ತಿದೆ. ಇಷ್ಟೆಲ್ಲ ಅವಘಡಗಳು ನಡೆಯುತ್ತಿದ್ದರೂ ಹುಣಸೂರು ನಗರಸಭೆಯ ಪರಿಸರ ಅಧಿಕಾರಿಗಳು ಕಂಡರೂ ಕಾಣದಂತೆ, ಕೇಳಿದರೂ ಕೇಳದಂತೆ ವರ್ತಿಸಿ ಕರ್ತವ್ಯ ಲೋಪ ಮಾಡುತ್ತಿದ್ದಾರೆ.

ಕೂಡಲೇ ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮತ್ತು ಥರ್ಮಾಕೋಲ್‌ಗಳನ್ನು ನಿಷೇಧಿಸಬೇಕು. ಅಂಗಡಿಗಳ ಸುತ್ತಮುತ್ತ ಶುಚಿತ್ವ ಕಾಪಾಡಬೇಕು ಎಂಬ ನಿರ್ದೇಶನ ನೀಡಬೇಕು. ಅಧಿಕಾರಿಗಳ ಈ ನಿರ್ದೇಶನವನ್ನು ಪಾಲಿಸದಿರುವ ಸೆಂಟರ್‌ಗಳನ್ನು ಮುಚ್ಚಿಸಬೇಕು. ತಪ್ಪಿದರೆ ದಸಂಸ ವು ಸಾರ್ವಜನಿಕರ, ಬಡಜನರ ಮತ್ತು ಮಕ್ಕಳ ಹಿತದೃಷ್ಟಿಯಿಂದ ನಗರಸಭೆ ಅಧಿಕಾರಿಗಳ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರಸಭೆಯ ವ್ಯವಸ್ಥಾಪಕ ಸಿದ್ದರಾಜು ಮನವಿ ಸ್ವೀಕರಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ನಗರಸಭೆ ಸದಸ್ಯರಾದ ಸತೀಶ್ ಕುಮಾರ್, ದಲಿತ ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಸೋಮು ಚಿಕ್ಕಹುಣಸೂರು, ಶಿವಾನಂದ ಕಲ್ಕುಣಿಕೆ, ಅಲೆಮಾರಿ ಸಂಘದ ಅಧ್ಯಕ್ಷರಾದ ಶೇಖರ್ ಅಂಬೇಡ್ಕರ್ ನಗರ, ಕಲ್ಕುಣಿಕೆ ಪಾರ್ವತಿ, ದಾಸಪ್ಪ, ಶೋಭಮ್ಮ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net