

ಬೆಳಗಾವಿ: ಒಳ ಮೀಸಲಾತಿ ಹಂಚಿಕೆಯಲ್ಲಿ ನಮಗೆ ಅನ್ಯಾಯವಾಗಿದ್ದು, ಈಗ ನೀಡಿರುವ ವರದಿಯನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ನಗರದಲ್ಲಿ ಗುರುವಾರ ಲಂಬಾಣಿ, ಕೊರಮ, ಕೊರಚ ಹಾಗೂ ಭೋವಿ ಸಮುದಾಯಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ಸಂಚಾರ ತಡೆದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೊಹಮ್ಮದ ರೋಷನ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.
ರಾಜ್ಯ ಸರಕಾರ ಮೀಸಲಾತಿ ಹಂಚಿಕೆಯಲ್ಲಿ ನಮಗೆ ಅನ್ಯಾಯ ಮಾಡಿದೆ. ಲಂಬಾಣಿ, ಕೊರಮ, ಕೊರಚ ಹಾಗೂ ಭೋವಿ ಸಮುದಾಯಗಳ ಜನಸಂಖ್ಯೆ ಬಲಗೈ ಹಾಗೂ ಎಡಗೈ ಸಮುದಾಯಗಳಿಂತ ಹೆಚ್ಚಿದೆ. ಆದರೆ ಈಗ ನೀಡಿರುವ ವರದಿ ದೋಷಪೂರಿತ ದತ್ತಾಂಶಗಳಿಂದ ಕೂಡಿದೆ. ಹೀಗಾಗಿ, ನಾವು ಈ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದ್ದು, ಇದನ್ನು ನಾವು ಒಪ್ಪುವುದಿಲ್ಲ. ಸರ್ಕಾರ ಈ ವರದಿಯನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ. 15ರ ಮೀಸಲಾತಿಯನ್ನು ಶೇ. 17ಕ್ಕೆರಿಸಿ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ಶೇ. 4.5ರಷ್ಟು ಮೀಸಲಾತಿ ೂಷಿಸಿದ್ದರು. ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ. 1ರಷ್ಟು ಮೀಸಲಾತಿ ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಒಟ್ಟು 63 ಸಮುದಾಗಳನ್ನು ಸೇರಿಸಿ ಶೇ. 5ರಷ್ಟು ಮಾತ್ರ ಮೀಸಲಾತಿ ೂಷಣೆ ಮಾಡಿರುವುದು ಖಂಡನಾರ್ಹ. ಮರುಪರಿಶೀಲಿಸಿ ನಮ್ಮ ಸಮುದಾಯಗಳಿಗೆ ಶೇ. 7ರಷ್ಟು ಮೀಸಲಾತಿ ನೀಡಿ, ಇತರ 59 ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದರು.
ಪರಮೇಶ ಕ್ಯಾರಕಟ್ಟಿ, ಮಂಜುನಾಥ ರಾಠೋಡ, ಮಂಜುನಾಥ ಪಮ್ಮಾರ, ಸುನಿಲ ದೋತ್ರೆ, ರಾಜು ಕ್ಯಾರಕಟ್ಟಿ, ಲೋಕೇಶ ರಾಠೋಡ, ಬಿ.ಪಿ.ಲಮಾಣಿ, ಮಹಾದೇವ ರಾಠೋಡ, ಶರತ್ ಪವಾರ, ದೇವೇಂದ್ರ ನಾಯಕ, ವಿನೋದ ಪಾಟೀಲ, ಅನಿಲ ರಾಠೋಡ, ಇತರಿದ್ದರು.