ವಾರಾಹಿ ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹ

SID-JUNE 1-1
Published on

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ

ಗುತ್ತಿಗೆದಾರ, ಇಲಾಖೆಯ ಮ್ಯಾಚ್‌ಫಿಕ್ಸಿಂಗ್‌ನಿಂದಾಗಿ ವಾರಾಹಿ ನೀರಾವರಿ ಮೂಲ ಯೋಜನೆಯು ಮಂದಗತಿಯಲ್ಲಿ ಸಾಗಲು, ಹಳ್ಳ ಹಿಡಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ತೀವ್ರ ವಿರೋಧವಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಸಿದ್ದಾಪುರ ವಾರಾಹಿ ನೀರಾವರಿ ಇಲಾಖೆಯಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ರೈತರ ಸಭೆಯಲ್ಲಿ ಮಾತನಾಡಿದರು.

ವಾರಾಹಿ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ. ನೀರು ಇಲ್ಲ, ಭೂಮಿಯೂ ಇಲ್ಲ. ಪರಿಹಾರ ಸಿಗುವ ಮೊದಲೇ ವಾರಾಹಿ ಯೋಜನೆಗೆ ಸ್ವಂತಃ ಭೂಮಿ ನೀಡಿರುವುದು ಇತಿಹಾಸದಲ್ಲಿಯೇ ಪ್ರಥಮ. ವಾರಾಹಿ ನೀರಿಗಾಗಿ ಹಿಂದೆ ಅಹೋ ರಾತ್ರಿ ಧರಣಿ ನಡೆಸಿ ನ್ಯಾಯ ಪಡೆದಿದ್ದೇವೆ. ಜನರ ಸಮಸ್ಯೆಗೆ ಇಲಾಖಾಧಿಕಾರಿಗಳು ಸ್ಪಂದಿಸುವ ಕಾರ್ಯವಾಗಬೇಕು. ಇಲ್ಲದಿದ್ದಲ್ಲಿ ಹೋರಾಟ ಮುಂದುವರಿಸಲಾಗುವುದು. ಕಾರ್ಕಳ, ಉಡುಪಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ವಾರಾಹಿ ನೀರು ಹೋಗುತ್ತದೆ. ವಾರಾಹಿ ಬುಡದಲ್ಲಿರುವ ರೈತರಿಗೆ ಯಾಕೇ ನೀರು ಕೊಡಲಾಗುವುದಿಲ್ಲ ಎಂದರು.

ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಮಾತನಾಡಿ, ವಾರಾಹಿ ಇಲಾಖೆ ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಂಡು ನೀರು ಕೊಡುವ ಬಗ್ಗೆ ಪ್ರಯತ್ನ ಮಾಡಿ. ಭೂಮಿ ಕಳೆದುಕೊಂಡ ರೈತರಿಗೆ ತೊಂದರೆ ನೀಡಬೇಡಿ. ಮೊದಲು ರೈತರಿಗೆ ಪರಿಹಾರ ಕೊಡಿ. ರೈತರಿಗೆ ನೀರು ಕೊಡುವ ಬಗ್ಗೆ ಮೀನಮೇಷ ಎಣಿಸಬೇಡಿ ಎಂದರು.

ಮೊಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಹಾಲಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ ಸೇರಿದಂತೆ ಇನ್ನಿತರರು ಸಭೆಯಲ್ಲಿ ಸಮಸ್ಯೆ ತಿಳಿಸಿದರು. ವಾರಾಹಿ ನೀರಾವರಿ ಇಲಾಖೆಯ ಸೂಪರ್‌ಟೆಂಟ್ ಇಂಜಿನಿಯರ್ ಪ್ರವೀಣ್, ಇಇ ಗಳಾದ ಎನ್.ಜಿ.ಭಟ್, ಕಿರಣ್ ಪಡ್ತಿ, ಎಇಇ ಅಶೋಕ, ಇಂಜಿನಿಯರ್‌ಗಳು ವಾರಾಹಿ ಯೋಜನೆಯ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು.

ಕಾಂಗ್ರೆಸ್ ಮುಖಂಡ ದಿನೇಶ ಹೆಗ್ಡೆ ಮೊಳಹಳ್ಳಿ, ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸತೀಶ ಕಿಣಿ ಬೆಳ್ವೆ, ಹಾಲಾಡಿ ಸರ್ವೋತ್ತಮ ಹೆಗ್ಡೆ, ಅಶೋಕ ಶೆಟ್ಟಿ ಚೋರಾಡಿ, ಮಲ್ಯಾಡಿ ಶಿವರಾಮ ಶೆಟ್ಟಿ, ಉದಯಕುಮಾರ ಶೆಟ್ಟಿ ವಂಡ್ಸೆ, ಶರತ್‌ಕುಮಾರ ಶೆಟ್ಟಿ ಬಾಳೆಕೆರೆ, ರವಿರಾಜ ಹೆಗ್ಡೆ ಹೈಕಾಡಿ, ಎಸ್.ಸಂಜೀವ ಶೆಟ್ಟಿ ಸಂಪಿಗೇಡಿ, ಕೃಷ್ಣರಾಜ್ ಶೆಟ್ಟಿ ಮಂದಾರ್ತಿ, ಮೊಳಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಪ್ರದೀಪ ಬಲ್ಲಾಳ, ವಿಶ್ವನಾಥ ಶೆಟ್ಟಿ ಶಿರಿಯಾರ, ಉಡುಪಿ ಜಿಲ್ಲಾ ರೈತ ಸಂಘದ ಸಿದ್ದಾಪುರ, ವಂಡ್ಸೆ, ತ್ರಾಸಿ, ಕಾವ್ರಾಡಿ, ಹಾಲಾಡಿ, ಕೋಟೇಶ್ವರ, ಮಂದಾರ್ತಿ ವಲಯದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ರೈತರ ಅಹವಾಲುಗಳು

ವಾರಾಹಿ ಯೋಜನೆಗೆ ಭೂಮಿ ಕಳೆದುಕೊಂಡರೂ ಇನ್ನೂ ಸಿಗದ ಪರಿಹಾರ. ಹಾಲಾಡಿ, ಮೊಳಹಳ್ಳಿ, ಮರತ್ತೂರು, ಗೋಪಾಡಿ, ಶಿರೂರು ಮೂರುಕೈ, ವಕ್ವಾಡಿ, ಹೈಕಾಡಿ, ಚೋರಾಡಿ ಭಾಗಗಳಲ್ಲಿ ವಾರಾಹಿ ಕಾಲುವೆಯ ಅಸಮರ್ಪಕ ಕಳಪೆ ಕಾಮಗಾರಿ, ವಕ್ವಾಡಿ ಜಿಲ್ಲಾ ಪಂಚಾಯಿತಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಯ ಹಾಳು ಮಾಡಿರುವುದು. ಹಾಲಾಡಿ ಪರಿಸರದಲ್ಲಿ ವಾರಾಹಿ ಕಾಲುವೆಗಳಲ್ಲಿ ಕಸ-ಕಡ್ಡಿ ತುಂಬಿರುವುದು, ಮರಮಟ್ಟು ಬಿದ್ದು ಕಾಲುವೆ ನೀರು ಹರಿಯುವಿಗೆ ತಡೆಯಾಗುತ್ತಿರುವುದು. ಸೌಕೂರು ಏತ ನೀರಾವರಿ ಯೋಜನೆಯು ಅಸಮರ್ಪಕ, ಕಳಪೆ ಕಾಮಗಾರಿ. ಸಿದ್ದಾಪುರ ಏತ ನೀರಾವರಿ ಯೋಜನೆ, ಹೊಸಂಗಡಿಯ ಕೋಟೆಕರೆಗೆ ನೀರು ಹಾಯಿಸುವ ಯೋಜನೆಯನ್ನು ಸಮರ್ಪಕವಾಗಿ ರೂಪಿಸುವ ಮೂಲಕ ತ್ವರಿತಗತಿಯಲ್ಲಿ ಕಾಮಗಾರಿ ನಡೆಸುವಂತೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net