

ರಟ್ಟಿಹಳ್ಳಿ: ಪಟ್ಟಣದ ಎಂ.ಜಿ. ಬ್ಯಾಂಕ್ ಬಳಿ ಮತ್ತು ಶಿವಾಜಿನಗರದ ರಸ್ತೆಯ ಬದಿಯಲ್ಲಿ ಕಳೆದ ಕೆಲ ತಿಂಗಳಿಂದ ಎರಡು ಮರಗಳು ಸಂಪೂರ್ಣವಾಗಿ ಒಣಗಿ ಗಾಳಿ ಮಳೆಗೆ ಬೀಳುವ ಅಪಾಯದ ಸ್ಥಿತಿಯಲ್ಲಿವೆ. ಈ ಮರಗಳನ್ನು ತೆರವುಗೊಳಿಸುವಂತೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಹೃದಯಭಾಗದ ಮುಖ್ಯ ರಸ್ತೆಯ ಬದಿಯಲ್ಲಿ ಎಂ.ಜಿ. ಬ್ಯಾಂಕ್ ಹತ್ತಿರದಲ್ಲಿ ಮರವೊಂದು ಒಣಗಿದ್ದು, ಅಪಾಯದ ಸ್ಥಿತಿಯಲ್ಲಿದೆ. ಮರದ ಪಕ್ಕದಲ್ಲಿನ ರಸ್ತೆಯಲ್ಲಿ ಸಾರ್ವಜನಿಕರು, ವಾಹನಗಳ ಸಂಖ್ಯೆ ನಿತ್ಯ ಹೆಚ್ಚಾಗಿರುತ್ತದೆ. ಪಕ್ಕದಲ್ಲೇ ಸರ್ಕಾರಿ ಶಾಲೆಯೂ ಇದೆ. ಅಕ್ಕ ಪಕ್ಕ ತರಕಾರಿ ಮತ್ತು ಮಾಂಸದಂಗಡಿಗಳಿವೆ.
ಪಟ್ಟಣದ ಶಿವಾಜಿನಗರದಲ್ಲಿ ಒಂದು ದೊಡ್ಡದಾದ ಈಚಲು ಮರವೂ ಸಂಪೂರ್ಣವಾಗಿ ಒಣಗಿದೆ. ಇತ್ತೀಚೆಗೆ ಈ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯ ಪಟ್ಟಣ ಪಂಚಾಯಿತಿ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಶಿವಾಜಿನಗರದ ಎರಡು ಬದಿಯಲ್ಲಿ ಸಾರ್ವಜನಿಕರು ವಾಸವಾಗಿದ್ದು, ನಿತ್ಯ ಈ ರಸ್ತೆಯಲ್ಲಿ ಎಂದಿನಂತೆ ವಾಹನಗಳು, ಸಾರ್ವಜನಿಕರು ಸಂಚರಿಸುತ್ತಾರೆ. ಗಾಳಿ-ಮಳೆಗೆ ಈ ಮರ ಬಿದ್ದರೆ ಅನಾಹುತ ಗ್ಯಾರಂಟಿ.
ಈ ಬಗ್ಗೆ ಸಂಬಂಧಿಸಿದ ಅರಣ್ಯ ಇಲಾಖೆ ಶೀಘ್ರವೇ ಈ ಎರಡು ಒಣ ಮರಗಳನ್ನು ತೆರವುಗೊಳಿಸಿ ಮುಂದಾಗಲಿರುವ ಅಪಾಯ ತಪ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಪಟ್ಟಣದಲ್ಲಿ ಇತ್ತೀಚೆಗೆ ಭಾರೀ ಗಾಳಿ ಮತ್ತು ಮಳೆಯಿಂದ ಅನೇಕ ಮರಗಳು ಬಿದ್ದು ಅಪಾಯ ಸಂಭವಿಸಿದೆ. ಅದೃಷ್ಟವಶಾತ್ ಈ ಒಣಮರಗಳು ಬಿದ್ದಿಲ್ಲ. ಎಂ.ಜಿ. ಬ್ಯಾಂಕ್ ಮತ್ತು ಶಿವಾಜಿನಗರದಲ್ಲಿ ಎರಡು ಮರಗಳು ಸಂಪೂರ್ಣವಾಗಿ ಒಣಗಿದ್ದು, ಗಾಳಿ-ಮಳೆಗೆ ಬಿದ್ದು ಹಾನಿ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಮರವನ್ನು ತೆರವುಗೊಳಿಸಬೇಕಾಗಿದೆ. | ಪರಮೇಶಪ್ಪ ಜಾಧವ, ಕೆ.ವೈ. ಬಾಜೀರಾಯರ್ ಸ್ಥಳೀಯ ನಿವಾಸಿಗಳು ರಟ್ಟಿಹಳ್ಳಿ ಪಟ್ಟಣದ ಎಂ.ಜಿ. ಬ್ಯಾಂಕ್ ಮತ್ತು ಶಿವಾಜಿನಗರದಲ್ಲಿರುವ 2 ಮರಗಳನ್ನು ಸೋಮವಾರ ಇಲಾಖೆಯ ಸಿಬ್ಬಂದಿ ಪರಿಶೀಲಿಸಿ ಶೀಘ್ರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. | ವಿಜಯಕುಮಾರ ಮುಡಬಾಗಿಲು ವಲಯ ಅರಣ್ಯಾಧಿಕಾರಿ ಹಿರೇಕೆರೂರು-ರಟ್ಟಿಹಳ್ಳಿ ತಾಲೂಕು