

ಮಡಿಕೇರಿ: ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮದ ಮಸೀದಿ ಸಮೀಪ ಸರ್ವೆ ನಂಬರ್ ೪೦/೧ ರಲ್ಲಿ (ಕೆ.ಎಸ್ ರಾಧಾಕೃಷ್ಣ ಮನೆ ಮುಂಭಾಗ) ಅಂದಾಜು ೩೦-೪೦ ಅಡಿ ಎತ್ತರದ ಬೀಟೆ ಮರವೊಂದು ಒಣಗಿ ನಿಂತಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.
ಒಣಗಿ ನಿಂತ ಮನೆಯ ಸಮೀಪದಲ್ಲಿಯೇ ೪-೫ ಮನೆಗಳಿದ್ದು, ನಿತ್ಯ ಸಂಚಾರಿಸುವ ಸ್ಥಳೀಯರಿಗೆ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಅಪಾಯದ ಆತಂಕ ಕಾಡುತ್ತಿದೆ. ಅಲ್ಲದೇ ಒಣಗಿ ನಿಂತ ಮರದ ಸಮೀಪವೇ ವಿದ್ಯುತ್ ತಂತಿಯೂ ಹಾದು ಹೋಗಿದೆ. ಮಳೆಗಾಲವಾಗಿರುದರಿಂದ ಗಾಳಿ-ಮಳೆ ಜೋರಾದ ಸಂದರ್ಭ ಸ್ಥಳೀಯ ನಿವಾಸಿಗಳು ಇದರಿಂದ ಆತಂಕ ಎದುರಿಸುವಂತೆ ಆಗಿದ್ದು, ನಿತ್ಯವೂ ಭಯದಿಂದಲೇ ಅತ್ತಿತ್ತ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಪಾಯದ ಮೂನ್ಸೂಚನೆ ಅರಿತ ಸ್ಥಳೀಯ ನಿವಾಸಿಗಳು ಈ ಮರವನ್ನು ತೆರವು ಮಾಡುವಂತೆ ೨೦೨೨ರ ಮೇ ತಿಂಗಳಿನಲ್ಲಿಯೇ ಸೋಮವಾರಪೇಟೆ ವಲಯ ಅರಣ್ಯಧಿಕಾರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಆದರೂ ಸಂಬಂಧಪಟ್ಟವರು ಮರ ತೆರವಿಗೆ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ. ಇನ್ನಾದರೂ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಒಣಗಿ ನಿಂತ ಮರದಿಂದ ಅನಾಹುತವಾಗುವ ಮುನ್ನ ಅದನ್ನು ತೆರವುಗೊಳಿಸುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.