

ಗುತ್ತಲ: ಪಟ್ಟಣದ ಜಾನುವಾರುಗಳ ಕುಡಿಯುವ ನೀರಿನ ಮೂಲವಾಗಿದ್ದ ದೊಡ್ಡ ಹಾಗೂ ಸಣ್ಣ ಹೊಂಡಗಳು ಪ್ರಸ್ತುತ ಪಿಶಾಚಿ ಕಳೆಯಿಂದ ತುಂಬಿ ಜಾನುವಾರುಗಳು ಕುಡಿಯಲು ನೀರಿಲ್ಲದೆ ನಿತ್ಯ ನರಳಾಡುವಂತಾಗಿದೆ. ಈ ಕೂಡಲೆ, ಎರಡು ಹೊಂಡಗಳನ್ನು ಸ್ವಚ್ಛಗೊಳಿಸಬೇಕು ಎಂದು ಉಪ ತಹಸೀಲ್ದಾರ್ ಸವಿತಾ ಹಿರೇಮಠ ಅವರಿಗೆ ಸ್ವಾಭಿಮಾನಿ ಕರವೇ ಕಾರ್ಯಕರ್ತರು ಬುಧವಾರ ಮನವಿ ಸಲ್ಲಿಸಿದರು.
9.06 ಎಕರೆ ಪ್ರದೇಶದಲ್ಲಿರುವ ದೊಡ್ಡ ಹಾಗೂ ಸಣ್ಣ ಹೊಂಡಗಳಿವೆ. ಈ ಎರಡು ಹೊಂಡಗಳಲ್ಲಿ ಕಳೆದ 2-3 ವರ್ಷಗಳಿಂದ ಪಿಶಾಚಿ ಕಳೆ ಬೆಳೆಯುತ್ತಿದೆ. ಇದರಿಂದ ಪಟ್ಟಣದ ಸಾವಿರಾರು ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ತೊಂದರೆಯಾಗಿದೆ. ಅಲ್ಲದೆ, ಈ ಎರಡು ಹೊಂಡಗಳ ಸುತ್ತಮುತ್ತಲಿನ ನಿವಾಸಿಗಳಿಗೂ ತೀವ್ರ ತೊಂದರೆಯಾಗಿದೆ. ಕೆಲವು ಹೊಂಡಗಳಿಗೆ ಕಸ ಎಸೆಯುತ್ತ ಅವುಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗಿದೆ. ಹೀಗಾಗಿ ಎರಡು ಹೊಂಡಗಳನ್ನು ಶುಚಿಗೊಳಿಸಿ ಜಾನುವಾರುಗಳಿಗೆ ಕುಡಿಯಲು ನೀರೊದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಉಪ ತಹಸೀಲ್ದಾರ್ ಸವಿತಾ ಹಿರೇಮಠ ಹಾಗೂ ಪಪಂ ಕಾರ್ಯಾಲಯದ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ಸ್ವಾಭಿಮಾನಿ ಕರವೇ ಉತ್ತರ ಕರ್ನಾಟಕ ಘಟಕದ ಕಾರ್ಯಾಧ್ಯಕ್ಷ ನಾಗರಾಜ ಮಡಿವಾಳರ, ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಜೋಶಿ, ಹಾವೇರಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಗೋಣೆಮ್ಮನವರ, ತಾಲೂಕಾಧ್ಯಕ್ಷ ಆನಂದ ಮುರಡಪ್ಪನವರ, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ ಸಿದ್ದಣ್ಣನವರ, ಗುತ್ತಲ ನಗರ ಘಟಕದ ಅಧ್ಯಕ್ಷ ನಿಂಗರಾಜ ಮರಡಿ, ಉಪಾಧ್ಯಕ್ಷ ಶಿವರಾಜ ಗಿರಿಯಪ್ಪನವರ, ಪ್ರಧಾನ ಕಾರ್ಯದರ್ಶಿ ವಿನಾಯಕ ಗಿರಿಯಪ್ಪನವರ, ಯುವ ಘಟಕದ ಅಧ್ಯಕ್ಷ ವಿನೋದ ಆಣೂರ, ಬೀರಪ್ಪ ಕರಬಣ್ಣನವರ, ಗೋಪಾಲ ಬಡಿಗೇರ, ಗುಡ್ಡಪ್ಪ ಮರಡಿ, ಡಾಕಪ್ಪ ಲಮಾಣಿ, ದೇವರಾಜ ಹೊನ್ನಪ್ಪನವರ ಇತರರಿದ್ದರು.