ಆನಂದ ಸಿಂಗ್ ಗೆ ಜಿಲ್ಲಾ ಉಸ್ತುವಾರಿ ವಹಿಸಿ: ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ

IMG_20221121_121512.jpg
Published on

* ವಿಜಯನಗರಕ್ಕೆ ಸಚಿವೆ ಜೊಲ್ಲೆ ಬೀಗರಿದ್ದಂತೆ

ಹೊಸಪೇಟೆ: ಸಚಿವೆ ಶಶಿಕಲಾ ಜೊಲ್ಲೆ ಅವರು ಬೀಗರಂತೆ ಬಂದು ಹೋಗುತ್ತಾರೆ. ವಿಜಯನಗರ  ಜಿಲ್ಲಾ ಉಸ್ತುವಾರಿಯನ್ನು ಸ್ಥಳೀಯ ಸಚಿವರಿಗೆ ವಹಿಸಬೇಕು ಎಂದು ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ನೂತನ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ‌ವಿಶೇಷ ಸಂದರ್ಭಗಳಲ್ಲಿ ಆಗಮಿಸುತ್ತಾರೆ. ಅಪರೂಪಕ್ಕೆ‌ ಅಧಿಕಾರಿಗಳೊಂದಿಗೆ ಸಭೆ‌ ನಡೆಸುತ್ತಾರೆ. ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೂರಿದರು.
ಮುಂದಿನ ತಿಂಗಳು ಹಂಪಿ ಉತ್ಸವ ನಡೆಯುವುದರಿಂದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮಾರ್ಗದರ್ಶನ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಖಂಡ ಬಳ್ಳಾರಿ‌ ಜಿಲ್ಲೆ ಯಲ್ಲಿ ಆನಂದ ಸಿಂಗ್ ಸೇರಿದಂತೆ ಇಬ್ಬರು ಸಚಿವರಿದ್ದು, ಅವರಲ್ಲೊಬ್ಬರಿಗೆ ಉಸ್ತುವಾರಿ ವಹಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆಯಿಂದಲೂ ಸರ್ಕಾರ ಹಂಪಿ ಉತ್ಸವವನ್ನು ನಿರ್ಲಕ್ಷಿಸಿದೆ. ಈ ಬಾರಿ ಜನವರಿ ೭, ೮ ರಂದು ಆಯೋಜಿಸಿ, ಎರಡು ದಿನಕ್ಕೆ ಸೀಮಿತಗೊಳಿಸಲಾಗಿದೆ.‌‌ ಮೊದಲ ದಿನ ಉದ್ಘಾಟನೆ ಮತ್ತೊಂದು ದಿನ ಉತ್ಸವ ನಡೆಸುವುದರಿಂದ ಅದರ ಮೂಲ ಉದ್ದೇಶ ಈಡೇರುವುದಿಲ್ಲ. ಅಲ್ಲದೇ ಜನವರಿಯಲ್ಲಿ ಉತ್ಸವ ಆಯೋಜಿಸುವುದರಿಂದ ಪರೀಕ್ಷಾ ಸಿದ್ಧತೆಯಲ್ಲಿರುವ ಎಸ್ಎಸ್ ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎಂ.ಪಿ.ಪ್ರಕಾಶ ಅವಧಿಯಲ್ಲಿರುವಂತೆ ನವೆಂಬರ್ ೩, ೪, ೫ ರಂದು ಮೂರು ದಿನಗಳ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ವಿನಾಯಕ ಶೆಟ್ಟರ್, ಸಾಮಾಜಿಕ ಜಾಲತಾಣದ ವಿಭಾಗೀಯ ಅಧ್ಯಕ್ಷ ನಿಂಬಗಲ್ ರಾಮಕೃಷ್ಣ, ಕಾಂಗ್ರೆಸ್ ಮಾಜಿ ಯುವ ಅಧ್ಯಕ್ಷ ಬಾಣದ ಗಣೇಶ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net