ಸರ್ಕಾರದಿಂದ ಕೆ.ಎಚ್. ರಾಮಯ್ಯ ಜಯಂತಿ ಆಚರಣೆಗೆ ಒತ್ತಾಯ

vokkaligara vikasa vedike
Published on

ಮೈಸೂರು: ಹಿಂದುಳಿದ ವರ್ಗಗಳ ಮೀಸಲಾತಿಗೆ ಭದ್ರ ಬುನಾದಿ ಹಾಕಿದ ಕೆ.ಎಚ್. ರಾಮಯ್ಯ ಅವರ ಜಯಂತಿಯನ್ನು ಸರ್ಕಾರದ ವತಿಯಿ ಂದ ಆಚರಿಸಬೇಕು ಎಂದು ಸುಯೋಗ್ ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್.ಪಿ. ಯೋಗಣ್ಣ ಆಗ್ರಹಿಸಿದರು.


ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ನಗರದ ಪುರಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆ.ಎಚ್. ರಾಮಯ್ಯ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಅಭ್ಯುದಯ ದೃಷ್ಟಿಯಿಂದ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿಗೆ ಕೆ.ಎಚ್. ರಾಮಯ್ಯ ಶ್ರಮಿಸಿದ್ದರು. ಆ ಮೂಲಕ ರಾಜಪ್ರಭುತ್ವದಲ್ಲಿಯೇ ಹಿಂದುಳಿದ ವರ್ಗಗಳ ಮೀಸಲಾತಿಗೆ ಭದ್ರ ಬುನಾದಿ ಹಾಕಿದರು ಎಂದರು.


ಕೆ.ಎಚ್. ರಾಮಯ್ಯ ಅವರ ವಿಚಾರಧಾರೆಗಳು ಇಂದಿನ ತಲೆಮಾರಿನವರಿಗೆ ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವ ಸಂದರ್ಭ ಕೆ.ಎಚ್. ರಾಮಯ್ಯ ಅವರ ಜೀವನ ಚರಿತ್ರೆಯ ಪಾಠವನ್ನು ಸೇರಿಸಬೇಕು. ರಾಮಯ್ಯ ಅವರ ಜೀವನ ಹಲವಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಮಯ್ಯ ದೇಶಕಂಡ ಅಪರೂಪದ ಸಮಾಜಮುಖಿ ವ್ಯಕ್ತಿ, ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ನಾಯಕ. ಸಮಾಜ ಸುಧಾರಣೆಗೆ ಅವರು ಸಾಕಷ್ಟು ಪ್ರಯತ್ನಗಳನ್ನು ನಡೆಸಿದರು. ಪ್ರಸ್ತುತ ಸಮಾಜ ಸುಧಾರಕರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಅವರ ಕಾಲಘಟ್ಟದಲ್ಲಿ ಸಮಾಜ ಸೇವೆ ಎಂಬುದು ಅಷ್ಟೊಂದು ಸುಲಭದ ವಿಚಾರವಾಗಿರಲಿಲ್ಲ. ಹಲವು ಕಷ್ಟಗಳ ನಡುವೆ ಅವರು ಸಮಾಜಸೇವೆ ಮಾಡಿದರು ಎಂದರು.

ಸಾಂಸ್ಕೃತಿಕ ಸಂಘಟಕ ಸತೀಶ್ ಜವರೇಗೌಡ, ಕುಣಿಗಲ್‌ನ ಶ್ರೀ ಅರೇ ಶಂಕರ ಮಹಾಸಂಸ್ಥಾನ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು, ವೇದಿಕೆ ಅಧ್ಯಕ್ಷೆ ಎಚ್.ಎಲ್. ಯಮುನಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಿಲ್ ಶಿವಣ್ಣ, ಸಮಾಜ ಸೇವಕ ರಾಮಕೃಷ್ಣೇಗೌಡ, ಗೌಡತಿಯರ ಸೇನೆ ರಾಜ್ಯಾಧ್ಯಕ್ಷೆ ರೇಣುಕಾ ಭಕ್ತರಹಳ್ಳಿ, ನಿವೃತ್ತ ಪ್ರಾಂಶುಪಾಲ ದೇವಿಪ್ರಸಾದ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net