ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರ ವರ್ಗಾವಣೆ ಆದೇಶ ರದ್ದುಪಡಿಸಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಸದಸ್ಯರು ಪಾಲಿಕೆ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಕೇವಲ ಐದೇ ತಿಂಗಳಲ್ಲಿ ಪಾಲಿಕೆ ಆಯುಕ್ತರನ್ನು ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ. ಯಾವುದೇ ಕಾರಣಕ್ಕೂ ಡಾ. ರುದ್ರೇಶ ಘಾಳಿ ಅವರನ್ನು ಸೇವೆಯಿಂದ ಬಿಡುಗಡೆ ಮಾಡಬಾರದು ಆಗ್ರಹಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪಂಪಣ್ಣ ಅಂಬಿಗೇರ ಮಾತನಾಡಿ, ಪಾಲಿಕೆಯ ಸಿವಿಲ್ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರರಿಗೆ ಕೆಲವೇ ತಿಂಗಳಲ್ಲಿ 33 ಕೋಟಿ ರೂ. ಪಾವತಿಸಿದ್ದಾರೆ. ಪಾಲಿಕೆ ಆಡಳಿತದಲ್ಲಿ ಆರ್ಥಿಕ ಶಿಸ್ತು ತರಲು ಪ್ರಯತ್ನಿಸಿದ್ದಾರೆ. ನೂರಕ್ಕೂ ಹೆಚ್ಚು ಪೌರ ಕಾರ್ವಿುಕರಿಗೆ ನೇರ ನೇಮಕಾತಿ ಪತ್ರ ನೀಡಿದ್ದಾರೆ. ಅವರಿಗೆ ಕನಿಷ್ಠ ಎರಡು ವರ್ಷ ಆಯುಕ್ತರಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಆಯುಕ್ತರ ವರ್ಗಾವಣೆ ಆದೇಶ ರದ್ದುಪಡಿಸದಿದ್ದರೆ ಹುಬ್ಬಳ್ಳಿಯ ಅಂಬೇಡ್ಕರ್ ಪ್ರತಿಮೆಯಿಂದ ತಹಸೀಲ್ದಾರ್ ಕಚೇರಿವರೆಗೆ ಮತ್ತು ಧಾರವಾಡದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಎಚ್ವರಿಸಿದರು.
ಸಂಘದ ಅಧ್ಯಕ್ಷ ಮೋಹನ ಗೌಡರ, ಉಪಾಧ್ಯಕ್ಷ ವಾಸೀಂ ಸನದಿ, ವಿವೇಕಾನಂದ ಭೋವಿ, ಜಾವಿದ್ ಕೊಪ್ಪಳ, ಇಜಾಜ್ ಬೇಪಾರಿ, ಮದನ ಪಂಚಪುತ್ರ, ಪ್ರಶಾಂತ ಅಣ್ಣಿಗೇರಿ, ಇತರರು ಇದ್ದರು.