

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಬೈಂದೂರು ತಾಲೂಕಿನ ನಾಡಾ ಗ್ರಾಮ ಪಂಚಾಯಿತಿ ಎದುರು ಆಟದ ಮೈದಾನವಿದೆ. ಆಟೋಟ ಚಟುವಟಿಕೆಗಳಿಗೆ ಈ ಮೈದಾನವೇ ಆಶ್ರಯ. ಈಗ ಈ ಮೈದಾನ ಮಧ್ಯೆ ಹಾಡಿಗರಡಿ ದೇವಸ್ಥಾನ ಸಂಪರ್ಕಕ್ಕೆ ರಸ್ತೆ ನಿರ್ಮಿಸಬೇಕು ಎಂಬ ಒತ್ತಾಯ ಕೇಳಿಬಂದಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆಟದ ಮೈದಾನ ಮೂರು ಎಕರೆಯಷ್ಟು ವಿಶಾಲವಾಗಿದ್ದು, ಅದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ವಸತಿಗೃಹ, ಪಶು ಚಿಕಿತ್ಸಾಲಯಕ್ಕೆ ಒಂದಿಷ್ಟು ಜಾಗ ಹೋಗಿದೆ. ಮಳೆ ಸಂದರ್ಭ ಬಿಟ್ಟು ಬಹುತೇಕ ಸಮಯ ಇಲ್ಲಿ ಕ್ರೀಡಾ ಚಟುವಟಿಕೆ ನಡೆಯುತ್ತಿರುತ್ತದೆ. ಭಾನುವಾರ, ರಜಾದಿನಗಳಲ್ಲಿ ಮೈದಾನ ತುಂಬಿರುತ್ತದೆ. ಮೈದಾನದ ಒಂದು ಬದಿ ಹಳೇ ಗ್ರಾಪಂ ಕಟ್ಟಡ, ಗ್ರಾಮಕರಣಿಕರ ಕಚೇರಿ ಇದೆ. ಹಳೇ ಗ್ರಾಪಂ ಕಟ್ಟಡ ಬದಿಯಲ್ಲಿ ರಸ್ತೆ ಹಾಗೂ ದೇವಸ್ಥಾನ ಸ್ವಾಗತ ಗೋಪುರ ಕಟ್ಟಡಕ್ಕೆ ಬೇಡಿಕೆ ಸಲ್ಲಿಸಿದ್ದು, ತಹಸೀಲ್ದಾರ್ ಶೋಭಾಲಕ್ಷ್ಮೀ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹಾಡಿಗರಡಿ ದೇವಸ್ಥಾನಕ್ಕೆ ಹೋಗಲು ಆಟದ ಮೈದಾನದ ಪಕ್ಕ ಡಾಂಬರು ರಸ್ತೆ (ನಾಡಾ - ಮೊವಾಡಿ ಸಂಪರ್ಕ) ಇದೆ. ನಾಡಾ ದೇವಸ್ಥಾನದಿಂದ ಮೈದಾನದ ತನಕ ಸರ್ವಋತು ರಸ್ತೆಯಾಗಿದ್ದು, ಅದನ್ನೇ ಮುಂದುವರಿಸಿ ನಾಡಾ -ಮೊವಾಡಿ ರಸ್ತೆಗೆ ಸೇರಿಸಿದರೆ ಪೂರ್ಣಗೊಳ್ಳುತ್ತದೆ. ದೇವಸ್ಥಾನವನ್ನು ಸಭಾಭವನ ಸಹಿತ ಇತ್ತೀಚೆಗೆ ಅಭಿವೃದ್ಧಿ ಪಡಿಸಿದ್ದು, ಸಂಪರ್ಕ ರಸ್ತೆ ಅವಶ್ಯಕ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಇರುವ ರಸ್ತೆ ಅಭಿವೃದ್ಧಿ ಮಾಡುವ ಬದಲು ಮೈದಾನದಲ್ಲಿ ರಸ್ತೆ ಬೇಕು ಎಂಬ ಹಠಕ್ಕೆ ಬೀಳುವುದು ಸರಿಯಲ್ಲ. ಮೈದಾನ ಉಳಿಸಿಕೊಳ್ಳಲು ಸಾರ್ವಜನಿಕರು ಹೋರಾಟದ ಬಗ್ಗೆ ಎಚ್ಚರಿಸಿದ್ದಾರೆ.
ಬೇಡಿಕೆ ತಿರಸ್ಕರಿಸಿತ್ತು ಗ್ರಾಪಂ: ಆಟದ ಮೈದಾನದ ಒಂದು ಪಾರ್ಶ್ವದಲ್ಲಿ ಹಾಡಿಗರಡಿಯಿದ್ದು, ರಸ್ತೆ ಹಾಗೂ ಸ್ವಾಗತ ಗೋಪುರಕ್ಕೆ ಒಪ್ಪಿಗೆ ಕೊಡುವಂತೆ ನಾಡಾ ಗ್ರಾಪಂಗೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಸಲ್ಲಿಸಿತ್ತು. ಆದರೆ ಆಟದ ಮೈದಾನದಲ್ಲಿ ರಸ್ತೆ ಹಾಗೂ ಸ್ವಾಗತ ಗೋಪುರ ನಿರ್ಮಿಸಲು ನಿರಾಕರಿಸಿತ್ತು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಹಾಡಿಗರಡಿ ದೈವಸ್ಥಾನ ರಸ್ತೆ ನಿರ್ಮಾಣ ಮುನ್ನೆಲೆಗೆ ಬಂದಿತ್ತು. ಮತ ಸೆಳೆಯುವ ನಿಟ್ಟಿನಲ್ಲಿ ಈ ಭರವಸೆ ಸಿಕ್ಕಿದ್ದು, ಆಮೇಲೆ ಗ್ರಾಪಂ ಆಡಳಿತ ಬದಲಾಗಿ ರಸ್ತೆ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದೆ.
ಎಲ್ಲ ಕಡೆ ಆಟದ ಮೈದಾನ ಅಭಿವೃದ್ಧಿಗೆ ಒತ್ತುಕೊಡುತ್ತಿದ್ದರೆ ನಾಡಾದಲ್ಲಿ ಇರುವ ಒಂದು ಮೈದಾನವನ್ನೂ ಧಾರೆ ಎರೆಯಲು ಮುಂದಾಗುತ್ತಿರುವುದು ನೋವಿನ ವಿಷಯ. ಮೈದಾನ ಅಭಿವೃದ್ಧಿ ಬದಲು ರಸ್ತೆಗೆ ಬಿಡುವುದು ಸರಿಯಲ್ಲ. ನಮಗೂ ದೇವರು, ದೇವಸ್ಥಾನದ ಬಗ್ಗೆ ಭಕ್ತಿ ನಂಬಿಕೆಯಿದೆ. ಮೈದಾನದಲ್ಲಿ ರಸ್ತೆ, ಸ್ವಾಗತ ಗೋಪುರ ಕಟ್ಟಲು ಒಪ್ಪಿಗೆ ಕೊಟ್ಟರೆ ಹೋರಾಟ ಅನಿವಾರ್ಯ. ಆವರಣ ಗೋಡೆ, ಟ್ರಾೃಕ್ ನಿರ್ಮಿಸಿ ಮೈದಾನ ಅಭಿವೃದ್ಧಿ ಮಾಡಬೇಕು. - ಮಂಜುನಾಥ ಪೂಜಾರಿಹೊಸ್ಸಳ ಕಲ್ಚರಲ್ ಟ್ರಸ್ಟ್ ನಾಡಾ, ಪಡುಕೋಣೆ ಹಿಂದೆ ಮೈದಾನ ಬೇರೆಯವರ ವಶದಲ್ಲಿದ್ದು, ಗ್ರಾಪಂ ಹಿಂದಿನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ ಮತ್ತು ಸ್ಥಳೀಯರ ಸಹಕಾರದಲ್ಲಿ ಸಾರ್ವಜನಿಕರ ಬಳಕೆಗೆ ಸಿಕ್ಕಿತ್ತು. ಮೈದಾನದಲ್ಲಿ ರಸ್ತೆಗೆ ಜಾಗ ಕೊಡಲು ಸಾಧ್ಯವಿಲ್ಲ. ದೇವಸ್ಥಾನಕ್ಕೆ ಹೋಗಲು ಬೇರೆ ಮಾರ್ಗವಿದೆ. ಈಗಾಗಲೇ ಕೆಇಬಿ, ಅಂಗನವಾಡಿ ಕಟ್ಟಡಕ್ಕೆ ಬೇಡಿಕೆಯಿದ್ದು, ಜಾಗ ದಾನ ಮಾಡುತ್ತ ಹೋದರೆ ಮೈದಾನವೇ ಇಲ್ಲದಂತಾಗುತ್ತದೆ. - ದಿನೇಶ್ ಕುಮಾರ್ ಶೆಟ್ಟಿಅಧ್ಯಕ್ಷ ನಾಡಾ ಗ್ರಾಮ ನಾಡಾ ಮೈದಾನದಲ್ಲಿ ರಸ್ತೆ ಬೇಡಿಕೆಯಿಟ್ಟಿದ್ದು, ಒಳಗೆ ರಸ್ತೆ ಮಾಡಲು ಅವಕಾಶ ಕೊಡಲು ಆಗುವುದಿಲ್ಲ. ರಸ್ತೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಏನು ನಿರ್ಣಯ ಮಾಡುತ್ತದೋ ಅದರ ಮೇಲೆ ರಸ್ತೆ ಭವಿಷ್ಯವಿದೆ.- ಎಚ್.ಎಸ್. ಶೋಭಾಲಕ್ಷ್ಮೀ ತಹಸೀಲ್ದಾರ್, ಬೈಂದೂರು.