

ವಿಜಯವಾಣಿ ಸುದ್ದಿಜಾಲ ಧಾರವಾಡ
ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಬಳಿ ತುಂಗಭದ್ರಾ ನದಿ ವಿಭಜಿಸುವ ಸ್ಥಳದಲ್ಲಿ ಭೈರನಪಾದ ಆಣೆಕಟ್ಟು ನಿರ್ಮಿಸಬೇಕು ಎಂದು ಕರ್ನಾಟಕ ಥಿಂಕರ್ಸ್ ಫೋರಂ ಅಧ್ಯಕ್ಷ ಪಿ.ಎಚ್. ನೀರಲಕೇರಿ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಾತನ ಕಥೆಗಳಲ್ಲಿ ಉಲ್ಲೇಖಿಸಿದಂತೆ ಹರಿಹರ ತಾಲೂಕಿನ ಗೋವಿನಾಳ ಗ್ರಾಮದ ಪೂರ್ವಕ್ಕೆ ಭೈರನಪಾದ ದೇವರ ಪಾದ ಹಾಗೂ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಗ್ರಾಮ ಬಳಿ (ಪಶ್ಚಿಮಕ್ಕೆ) ತಲೆ ಭಾಗವಿದೆ. ಈ ಎರಡು ಸ್ಥಳಗಳನ್ನು ಸೇರಿಸುವ ಮೂಲಕ ಹರಿಹರ ತಾಲೂಕಿನ ಭೈರನಪಾದ ಬಳಿ ಆಣೆಕಟ್ಟು ನಿರ್ಮಿಸಬೇಕು. ಇದರಿಂದ ಕೆಳ ಭಾಗದ ಲಕ್ಷಾಂತರ ಹೆಕ್ಟೇರ್ ಜಮೀನುಗಳ ನೀರಾವರಿಗೆ ಮತ್ತು ಜನ- ಜಾನುವಾರುಗಳಿಗೆ ನೀರು ಸಿಗಲಿದೆ ಎಂದರು.
ಈ ಯೋಜನೆ ಅನುಷ್ಠಾನಗೊಂಡಲ್ಲಿ ಗದಗ ಜಿಲ್ಲೆಯ 4.82 ಲಕ್ಷ ಹೆಕ್ಟೇರ್, ಬಾಗಲಕೋಟೆಯ 3.50 ಹೆಕ್ಟೇರ್, ಹರಿಹರದ 3 ಲಕ್ಷ, ಬಳ್ಳಾರಿಯ 2.50 ಲಕ್ಷ, ಧಾರವಾಡ 22 ಲಕ್ಷ, ಕಾರವಾರ 1.75 ಲಕ್ಷ ಹೆಕ್ಟೇರ್ ಪ್ರದೇಶ ಸೇರಿ ಒಟ್ಟು 1.50 ಕೋಟಿ ರೈತರ ಕುಟುಂಬಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ.
ಕೊಪ್ಪಳ ಜಿಲ್ಲೆಯ ನವಿಲೇ ಯೋಜನೆಯಿಂದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ಮಾತ್ರ ಅನುಕೂಲವಾಗಲಿದೆ. ಆ ಜಿಲ್ಲೆಗಳು ಈಗಾಗಲೇ ಭಾಗಶಃ ನೀರಾವರಿ ಸೌಲಭ್ಯ ಪಡೆದಿವೆ. ನವಿಲೇ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ 13 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಈ ಯೋಜನೆ ಮುಖ್ಯವಾಗಿದೆ. ಹೀಗಾಗಿ ಜನಪ್ರತಿನಿಧಿಗಳು, ಸಚಿವರು, ಕೇಂದ್ರ ಸಚಿವರು, ಆಸಕ್ತಿ ವಹಿಸಬೇಕು. ನಮ್ಮ ಸಂಸ್ಥೆ ವತಿಯಿಂದ ಹೋರಾಟ, ಜನಾಂದೋಲನ ನಿರಂತರವಾಗಿರಲಿದೆ ಎಂದರು.
ಅಂಜನಕುಮಾರ ಕಡೇಮನಿ, ರಾಜು ಮಸವಳ್ಳಿ ಇತರರು ಇದ್ದರು.