ಮನೆ ನಿರ್ಮಿಸಿಕೊಡುವಂತೆ ಆಗ್ರಹ

12
Published on


ಮೈಸೂರು: ರಾಜೀವ್‌ಗಾಂಧಿ ಗ್ರಾಮೀಣ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಮನೆ ಕಟ್ಟಿಕೊಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಫಲಾನುಭವಿಗಳು ನಗರಪಾಲಿಕೆ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

2000ನೇ ಇಸವಿಯಲ್ಲಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಬಡವರಿಗೆ 20*30 ನಿವೇಶನದಲ್ಲಿ ಮನೆ ಕಟ್ಟಿಕೊಡುವುದಾಗಿ ಅರ್ಜಿ ಕರೆಯಲಾಗಿತ್ತು. ಅದರಂತೆ 2003-04ರಲ್ಲಿ ಫಲಾನುಭವಿಗಳಿಗೆ ಗೊರೂರು ಗ್ರಾಮದಲ್ಲಿ ನಿವೇಶನ ನೀಡಲಾಗುವುದು ಎಂದು ದಾಖಲೆ ಪಡೆದುಕೊಂಡು ನೋಂದಣಿಯನ್ನೂ ಮಾಡಿಕೊಟ್ಟಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಆಶ್ರಯ ಯೋಜನೆ, ರಾಜೀವ್‌ಗಾಂಧಿ ಗ್ರಾಮೀಣ ವಸತಿ ಯೋಜನೆಯ ಫಲಾನುಭವಿಗಳ ಸಾಲ ಮನ್ನಾ ಮಾಡಿ, ಫಲಾನುಭವಿಗಳನ್ನು ಸಂಪೂರ್ಣ ಮಾಲೀಕರೆಂದು ಘೋಷಿಸಿ, ಹಕ್ಕು ಖುಲಾಸೆ ನೀಡುವಂತೆ ಆದೇಶಿಸಿದ್ದರು. ಹೀಗಾಗಿ ಸದರಿ ನಿವೇಶನ ಹಾಗೂ ಮನೆಗಳ ಫಲಾನುಭವಿಗಳಾದ ನಾವುಗಳೇ ಸಂಪೂರ್ಣ ಮಾಲೀಕರಾಗಿರುತ್ತೇವೆ. ಆದರೆ, ಅಧಿಕಾರಿಗಳು, ಆಶ್ರಯ ಸಮಿತಿ ಅಧ್ಯಕ್ಷರು 17 ವರ್ಷಗಳಿಂದ ಮನೆ ಕಟ್ಟಿಕೊಡದೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.

ಬಡ ಫಲಾನುಭವಿಗಳ ಬದುಕಿನಲ್ಲಿ ಆಟವಾಡದೆ ಮೊದಲು ನೋಂದಣಿ ಮಾಡಿಸಿರುವ ನಿವೇಶನಗಳಿಗೆ ಮೂಲಸೌಕರ್ಯಗಳನ್ನು ತುರ್ತಾಗಿ ನೀಡಬೇಕು. ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ನಿವೇಶಗಳನ್ನು ನೋಂದಾಯಿಸಿಕೊಂಡಿರುವ ನಮಗೂ 4.9 ಲಕ್ಷ ರೂ ಕಟ್ಟಬೇಕು ಎಂದು ನೀಡಿರುವ ನೋಟಿಸ್ ಹಿಂಪಡೆಯಬೇಕು. ಆಶ್ರಯ ಮನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಹಾಗೂ ಖುಲಾಸೆ ಪತ್ರವನ್ನು ಶೀಘ್ರವೇ ನೀಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪಾಲಿಕೆ ಮಾಜಿ ಸದಸ್ಯ ಸುನೀಲ್, ಮುಖಂಡರಾದ ಎಂ.ಪ್ರದೀಪ್‌ಕುಮಾರ್, ಮಂಜುನಾಥ್, ಶ್ರೀಕಂಠ, ನಾಗರಾಜು, ಮಧುವನ ಚಂದ್ರು, ಮಂಜು, ರಾಘವೇಂದ್ರ, ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net