

ಬೆಳಗಾವಿ: ಸವದತ್ತಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸಿದ ಪ್ರಕರಣದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಭಾಗಿಯಾಗಿದ್ದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶ್ರೀರಾಮ ಸೇನೆಯಂತಹ ಸಂಟನೆಗಳನ್ನು ನಿಷೇಧಿಸುವಂತೆ ಬೆಳಗಾವಿ ಮುಸ್ಲಿಂ ಸಮಾಜ ಒಕ್ಕೂಟ ಆಗ್ರಹಿಸಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದ ಮುಖಂಡರು, ಅಪರ ಜಿಲ್ಲಾಧಿಕಾರಿ ಮೂಲಕ ಸಿಎಂ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಮುಖ್ಯಾಧ್ಯಾಪಕ ಸುಲೈಮಾನ್ರನ್ನು ಶಾಲೆಯಿಂದ ವರ್ಗಾವಣೆ ಮಾಡುವಂತೆ ಮಾಡಲು, ಅವರಿಗೆ ಕೆಟ್ಟ ಹೆಸರು ತರಲು ಮಕ್ಕಳ ಜೀವದ ಜತೆ ಆಟವಾಡಲು ಯತ್ನಿಸಿದ್ದಾರೆ. ಕುಡಿಯುವ ನೀರಿಗೆ ವಿಷ ಮಿಶ್ರಣ ಮಾಡಿ ಮಕ್ಕಳನ್ನು ಹತ್ಯೆ ಮಾಡುವ ಪ್ರಯತ್ನ ಮಾಡಿರುವುದು ಖಂಡನೀಯ. ಅದೃಷ್ಟವಶಾತ್ ದುರಂತವೊಂದು ತಪ್ಪಿದೆ. ಸದ್ಯ ಪೊಲೀಸರು ಬಂಧಿಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಅಪಾಯಕಾರಿ ಮತ್ತು ಅಮಾನುಷ್ಯ ಮನೋಭಾವನೆ ಹೊಂದಿರುವ ಶ್ರೀರಾಮ ಸೇನೆಯಂತಹ ಸಂಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಎಸ್.ಎಂ. ಮೋಕಾಶಿ, ಇಕ್ಬಾಲ್ ಜಕಾತಿ, ಅನ್ವರ್ ಕಿಲ್ಲೇದಾರ್, ಸಲೀಂ ಪಠಾಣ, ಶಾಹೀದ್ ಪಠಾಣ, ಆರೀಫ್ ಶೇಖ್ ಇತರರಿದ್ದರು.