

ಚಿಕ್ಕಮಗಳೂರು: ಬಕ್ರೀದ್ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಪಾಲಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರು ಬುಧವಾರ ಎಸ್‌ಪಿ ವಿಕ್ರಮ್ ಅಮಟೆ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಬಳಿಕ ಮಾತನಾಡಿದ ಪರಿಷತ್ ಕಾರ್ಯದರ್ಶಿ ರಂಗನಾಥ್, ದೇಶ ಹಾಗೂ ರಾಜ್ಯದ ಕಾನೂನಿನ್ವಯ ಹಾಗೂ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿರುವ ಕಾರಣ ಬಕ್ರೀದ್ ಸೇರಿದಂತೆ ಇನ್ನಿತರೆ ಹಬ್ಬದ ವೇಳೆಯಲ್ಲಿ ಜಾನುವಾರು, ಪ್ರಾಣಿಗಳ ಹತ್ಯೆ ನಿಷೇಧಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾಯ್ದೆಯನ್ವಯ ಯಾವುದೇ ರೀತಿಯ ಪ್ರಾಣಿಗಳ ಹತ್ಯೆ ನಿಷೇಧವಿದೆ ಹಾಗೂ ಕುರ್ಬಾನಿಗೆ ಕೊಟ್ಟ ಸ್ಥಳವನ್ನು ಸರ್ಕಾರ ಮುಟ್ಟುಗೋಲಿಗೆ ಅವಕಾಶವಿದೆ. ರಾಜ್ಯದಲ್ಲಿ ಪ್ರಾಣಿಬಲಿ ನಿಷೇಧ ಕಾಯ್ದೆ ತಿದ್ದುಪಡಿ ಪ್ರಕಾರ ಜಾನುವಾರು ಬಲಿ ನಿಷೇಧವಿದೆ. ಸುಪ್ರೀಂ ಕೋರ್ಟ್ ಆದೇಶ ಹಾಗೂ ಕಾಲ ಕಾಲಕ್ಕೆ ಸರ್ಕಾರದ ವಿವಿಧ ಆದೇಶಗಳಂತೆ ಜಾನುವಾರುಗಳ ಕುರ್ಬಾನಿ ಕಟ್ಟುನಿಟ್ಟಾಗಿ ತಡೆಹಿಡಿಯಬೇಕು ಎಂದರು.
ಹೀಗಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಜಾನುವಾರು ಸಾಗಾಟವಾಗದಂತೆ ಗಮನಹರಿಸಬೇಕು. ಅಲ್ಲದೇ ಬಕ್ರೀದ್‌ವರೆಗೂ ನಾಕಾಬಂಧಿ ಹಾಕಬೇಕು. ಕಿವಿಯೋಲೆ ಇಲ್ಲದ ಜಾನುವಾರುಗಳನ್ನು ಸಾರ್ವಜನಿಕ ಜಾಗದಲ್ಲಿ ಶೇಖರಿಸಿಡದಂತೆ, ಮೇಯಲು ಬಿಡದಂತೆ, ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಮಾಧ್ಯಮದ ಮೂಲಕ ಪ್ರಚಾರಪಡಿಸಬೇಕು ಎಂದು ಒತ್ತಾಯಿಸಿದರು.
ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ಅಲ್ಲದೇ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು. ಕಾಯ್ದೆಯ ಅನ್ವಯ ಜಾನುವಾರು ಹತ್ಯೆ ತಡೆಯುವ ಹಕ್ಕು ಸಾರ್ವಜನಿಕರಿಗಿದೆ. ಮೊದಲೇ ಪೊಲೀಸರು ಜಾನುವಾರು ಅಕ್ರಮ ಸಾಗಾಟ, ಶೇಖರಣೆ, ಹತ್ಯೆಯ ತಡೆಯುವ ಮೂಲಕ ಸಾರ್ವಜನಿಕರು ಹಕ್ಕು ಉಪಯೋಗಿಸಲು ಅವಕಾಶ ಸಿಗದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶ್ಯಾಮ್ ವಿ.ಗೌಡ, ಸುನೀಲ್ ಆಚಾರ್ಯ, ಪ್ರದೀಪ್, ಕಿರಣ್, ಆಟೋ ಶಿವಣ್ಣ ಉಪಸ್ಥಿತರಿದ್ದರು.