

ಹುಣಸೂರು: ನಗರದ ಗ್ರಾಮಾಂತರ ಬಸ್ ನಿಲ್ದಾಣದ ಆವರಣದಲ್ಲಿ ಸೌತೆಕಾಯಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಆಗ್ರಹಿಸಿ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ನೇತೃತ್ವದಲ್ಲಿ ನಗರಸಭಾ ಸದಸ್ಯರು, ಆಟೋ ಚಾಲಕರು ಮತ್ತು ನಾಗರಿಕರು ದಿಢೀರ್ ಪ್ರತಿಭಟನೆ ನಡೆಸಿದರು.
ನಗರಸಭಾ ಸದಸ್ಯರು ಮತ್ತು ನಾಗರಿಕರು ವ್ಯಾಪಾರಿಗಳು ಸೌತೆಕಾಯಿ ಮಾರಾಟ ಮಾಡುವ ತಟ್ಟೆಯನ್ನು ಹಿಡಿದು ಬಸ್‌ನ ಪ್ರಯಾಣಿಕರಿಗೆ ಸೌತೆಕಾಯಿ ಮಾರಾಟ ಮಾಡುವ ಮೂಲಕ ವಿಶಿಷ್ಟ ಪ್ರತಿರೋಧವನ್ನು ತೋರಿದರು.
ಯಾವುದೇ ಕಾರಣಕ್ಕೂ ಸೌತೆಕಾಯಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಡಿಪೋ ಮ್ಯಾನೇಜರ್ ಸುಬ್ರಮಣ್ಯ ಹೇಳಿದಾಗ ಗ್ರಾಮಾಂತರ ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ 2 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಬಡ ವ್ಯಾಪಾರಿಗಳ ಹೊಟ್ಟೆಗೆ ತಣ್ಣೀರುಬಟ್ಟೆ ಹಾಕುತ್ತಿರುವ ಸಾರಿಗೆ ಅಧಿಕಾರಿಗಳಿಗೆ ಧಿಕ್ಕಾರ ಎಂದು ಘೋಷಣೆ ಮೊಳಗಿಸಿದರು.
ಈ ವೇಳೆ ಮಾತನಾಡಿದ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಶಾಸಕ ಜಿ.ಡಿ.ಹರೀಶ್‌ಗೌಡರು ಫೋನ್ ಮೂಲಕ ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರ ಜತೆ ಮಾತನಾಡಿ, ವ್ಯಾಪಾರಕ್ಕೆ ಅವಕಾಶ ನೀಡಲು ಒತ್ತಾಯಿಸಿದ ಪರಿಣಾಮ ಎಂಡಿ ಕೂಡ ಒಪ್ಪಿಕೊಂಡಿದ್ದಾರೆ. ವ್ಯಾಪಾರಕ್ಕೆ ಅನುವು ಮಾಡಿಕೊಡಲು ಅಧೀನ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಹೀಗಿದ್ದೂ ಹುಣಸೂರು ಡಿಪೋ ಮ್ಯಾನೇಜರ್ ಸುಬ್ರಮಣ್ಯ, ಸೆಕ್ಯೂರಿಟಿ ಅಧಿಕಾರಿ ರಘು ಮುಂತಾದವರು ಬಡವ್ಯಾಪಾರಿಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ವ್ಯಾಪಾರ ಮಾಡಲು ಬಂದರೆ ಅವರ ತಟ್ಟೆಗೆ ಫಿನಾಯಿಲ್ ಹಾಕುವುದಾಗಿ ಬೆದರಿಕೆಯೊಡ್ಡಿ ನಿಲ್ದಾಣದಿಂದ ಹೊರಕ್ಕೆ ದೂಡುತ್ತಿದ್ದಾರೆ. ಇದು ಯಾವ ನ್ಯಾಯ? ಕಳೆದ 25 ವರ್ಷಗಳಿಂದ ಇದನ್ನೇ ನಂಬಿ ಬದುಕುತ್ತಿರುವ 25ಕ್ಕೂ ಹೆಚ್ಚು ಕುಟುಂಬಗಳು ಜೀವನಕ್ಕೆ ಎಲ್ಲಿಗೆ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದೇಶವಿಲ್ಲ, ಮೆಮೋ ಮಹಿಮೆಯಂತೆ: ಸೌತೆಕಾಯಿ ವ್ಯಾಪಾರವನ್ನು ನಿಲ್ದಾಣದೊಳಗೆ ಮಾಡಬಾರದೆಂದ ಸರ್ಕಾರದ ಆದೇಶವಿದ್ದರೆ ತೋರಿಸಿ ಎಂದರೆ ತೋರಿಸುತ್ತಿಲ್ಲ. ಹಿರಿಯ ಅಧಿಕಾರಿಗಳು ಮೆಮೋ ನೀಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹಾಗಾದರೆ, ಅಧಿಕಾರಿ ನೀಡಿದ ಮೆಮೋಗೆ ಅಷ್ಟು ಅಧಿಕಾರವುಂಟೇ? ಬಸ್ ನಿಲ್ದಾಣದೊಳಗೆ ಕಾರ್ ಪಾರ್ಕಿಂಗ್ ಮಾಡಿದ್ದಾರೆ. ಈವರೆಗೆ ಕೆಎಸ್‌ಆರ್‌ಟಿಸಿಯಿಂದ ಕಾರ್ ಪಾರ್ಕಿಂಗ್‌ಗೆ ಅಧಿಕೃತ ಮುದ್ರೆ ಸಿಕ್ಕಿಲ್ಲ. ಟೆಂಡರ್ ಪ್ರಕ್ರಿಯೆ ನಡೆದಿದೆ ಎನ್ನುತ್ತಾರೆ. ಅದಾಗಲೇ 20ಕ್ಕೂ ಹೆಚ್ಚು ಕಾರ್‌ಗಳು ಅಲ್ಲಿ ನಿಂತಿವೆಯಲ್ಲ. ಅದಕ್ಕೆ ಕಾನೂನಿಲ್ಲವೇ? ಮೆಮೋ ಇಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅಧಿಕಾರಿಗಳು ನಿರುತ್ತರರಾದರು. ನಾಗರಿಕರು ಮತ್ತು ಇತರ ಸದಸ್ಯರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸದಸ್ಯ ದೇವರಾಜ್ ಮಾತನಾಡಿ, ನಗರಸಭಾ ಅಧ್ಯಕ್ಷರು ಈ ನಗರದ ಪ್ರಥಮಪ್ರಜೆ. ಅವರನ್ನು ಕಡಗಣಿಸಿ ಪ್ರತಿಭಟನೆ ನಡೆಸುವಂತೆ ಮಾಡಿರುವುದು ಹುಣಸೂರಿಗೆ ಅಪಮಾನ ಮಾಡಿದಂತೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಈ ದುರ್ವರ್ತನೆ ಖಂಡನೀಯ. ಜನಪ್ರತಿನಿಧಿಗಳಾಗಿ ನಾವು ಬಡವರ ಪರವಾಗಿ ಬಂದಿದ್ದೇವೆ. ನಮ್ಮ ಕಾಳಜಿಯನ್ನು ಅರ್ಥ ಮಾಡಿಕೊಳ್ಳದೆ ಡಿಪೋ ಮ್ಯಾನೇಜರ್ ಭಂಡತನ ಪ್ರದರ್ಶಿಸುತ್ತಿರುವುದು ಖಂಡನೀಯವೆಂದು ಕಿಡಿಕಾರಿದರು.
ಮಳೆಯಲ್ಲಿಯೇ ಮುಂದುವರಿದ ಪ್ರತಿಭಟನೆ:
ಮಧ್ಯಾಹ್ನ 2 ಗಂಟೆಗೆ ಆರಂಭಗೊಂಡ ಪ್ರತಿಭಟನೆ 4 ಗಂಟೆಯವರೆಗೂ ಮುಂದುವರಿಯಿತು. ಹಿರಿಯ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಪ್ರತಿಭಟನಾಕಾರರು ತಿಳಿಸಿದರು. ನಂತರ ಡಿಪೋ ಮ್ಯಾನೇಜರ್, ಪ್ರತಿಭಟನಾಕಾರರ ಬಳಿ ಬಂದು ಸೋಮವಾರ ಜಿಲ್ಲಾಧಿಕಾರಿ ಬರಲಿದ್ದು, ನಿಮ್ಮೊಂದಿಗೆ ಚರ್ಚಿಸಲಿದ್ದಾರೆ. ಇದೀಗ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಅವರ ಮಾತಿಗೆ ಒಪ್ಪಿ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸ್ಥಾಯಿಸಮಿತಿ ಅಧ್ಯಕ್ಷ ಹರೀಶ್‌ಕುಮಾರ್, ಸದಸ್ಯರಾದ ಎಚ್.ಪಿ.ಸತೀಶ್‌ಕುಮಾರ್, ಶ್ರೀನಾಥ್, ಯೂನೂಸ್ ಖಾನ್, ವಿವೇಕಾನಂದ, ಆಟೋ ಚಾಲಕರು ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿಗಳು ಸೋಮವಾರ ನಗರಸಭೆ ಕಚೇರಿಯಲ್ಲಿ ನಮ್ಮೊಂದಿಗೆ ಈ ಸಂಬಂಧ ಚರ್ಚಿಸಲಿದ್ದಾರೆ. ಬಡ ವ್ಯಾಪಾರಿಗಳಿಗೆ ಅವಕಾಶ ನೀಡಲೇಬೇಕು. ಅಧಿಕಾರಿಗಳು ಒಪ್ಪದಿದ್ದರೆ, ಶಾಸಕ ಜಿ.ಡಿ.ಹರೀಶ್‌ಗೌಡ ನೇತೃತ್ವದಲ್ಲೇ ಸಾರಿಗೆ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ