ಕೊಡವರಿಗಾಗಿ ಪ್ರತ್ಯೇಕ ಕೋಡ್, ಕಾಲಮ್ ಸೇರಿಸಲು ಒತ್ತಾಯ

cnc janajagruthi
Published on

ಮಡಿಕೇರಿ: ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್‌ನ್ನು ಸೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಾದಾಪುರದಲ್ಲಿ ಶನಿವಾರ ೮ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವಲ್ಯಾಂಡ್‌ಗೆ ಮಾರಕವಾಗಿರುವ ಭೂಪರಿವರ್ತನೆಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ಸರ್ವ ಕೊಡವರು ಅರಿತುಕೊಳ್ಳಬೇಕು. ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಸಿಎನ್‌ಸಿ ನಡೆಸುವ ಶಾಂತಿಯುತ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.

೨೦೨೫-೨೬ ರ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಬೇಕು. ೨೦೨೬ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇ? ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನಡಿ ಆದಿಮಸಂಜಾತ(ಆನಿಮಿಸ್ಟಿಕ್) ಕೊಡವ ಸಮುದಾಯವನ್ನು ಸಂರಕ್ಷಿಸಬೇಕು.ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದು ತಿಳಿಸಿದರು.

ಮಾನವ ಸರಪಳಿ ಕಾರ್ಯಕ್ರಮವು ಕೊಡವ ಸಮುದಾಯದ ಹಕ್ಕೊತ್ತಾಯಗಳಿಗೆ ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ಶಾಂತಿಯುತವಾಗಿ ಕೊಡವಲ್ಯಾಂಡ್ ನಾದ್ಯಂತ ನಡೆಯುತ್ತಿದೆ. ಬದಿಗೇರಿ ನಾಡ್, ಸೂರ್ಲಬ್ಬಿ ನಾಡ್, ಗಡಿನಾಡ್, ಪಾಲೇರಿನಾಡ್ ಭಾಗದ ಕೊಡವ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದರಿಂದ ಸಿಎನ್‌ಸಿಯ ಹೋರಾಟದ ಬಲ ಮತ್ತಷ್ಟು ಹೆಚ್ಚಿದೆ ಎಂದು ಎನ್.ಯು.ನಾಚಪ್ಪ ಹೇಳಿದರು.

ಭೂಪರಿವರ್ತನೆಯಿಂದ ಅನಾಹುತ: ೨೦೧೮ರಲ್ಲಿ ಕೊಡವಲ್ಯಾಂಡ್‌ನಲ್ಲಿ ವ್ಯಾಪಕ ಜಲಸ್ಫೋಟ ಮತ್ತು ಭೂಸ್ಫೋಟ ಸಂಭವಿಸಿ ಸಾವುನೋವು, ಕಷ್ಟನಷ್ಟಗಳು ಎದುರಾಗಿದ್ದರೂ ಜಿಲ್ಲಾಡಳಿತ ಎಗ್ಗಿಲ್ಲದೆ ಭೂಪರಿವರ್ತನೆಗೆ ಅವಕಾಶ ನೀಡುತ್ತಿದೆ. ಹೊರಗಿನ ಬಂಡವಾಳಶಾಹಿಗಳು ಕಪ್ಪುಹಣವನ್ನು ಬಳಸಿ ಭೂಖರೀದಿಯಲ್ಲಿ ತೊಡಗಿದ್ದಾರೆ. ದೊಡ್ಡ ದೊಡ್ಡ ರೆಸಾರ್ಟ್‌ಗಳು ತಲೆ ಎತ್ತುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತವೇ ಎದುರಾಗುವ ಸಾಧ್ಯತೆಗಳಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.

ಆದಿಮಸಂಜಾತ ಕೊಡವರಿಗೆ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯೊಂದಿಗೆ ಸ್ವಯಂ ಆಡಳಿತ ಮತ್ತು ಆಂತರಿಕ ಸ್ವಯಂನಿರ್ಣಯದ ಹಕ್ಕನ್ನು ಖಾತ್ರಿ ಪಡಿಸುವುದರಿಂದ ಈ ರೀತಿಯ ಅಕ್ರಮ ಮತ್ತು ಅನಾಹುತಗಳನ್ನು ತಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ನಾಪಂಡ ರಮ್ಯ ಚಂಗಪ್ಪ, ಶ್ರೀಮತಿ ಪಾಸುರ ರಜಿನಿ, ನಾಪಂಡ ಶೈಲಾ, ಮೇದೂರ ಪ್ರತೀಕ, ನಾಗಂಡ ರೇಣು, ಕುಟ್ಟಂಡ ಗೊಂಬೆ, ತಂಬುಕುತ್ತೀರ ಜಾಜಿ, ತಂಬುಕುತ್ತೀರ ರೇಖಾ, ಉದ್ದಿನಾಡಂಡ ಪೊನ್ನಮ್ಮ, ಶ್ರೀಮತಿ ಮಂಡೀರ ನೀಲಮ್ಮ, ಬಾಳೆಯಡ ಪೊನ್ನಮ್ಮ, ಮೇದೂರ ಕಂಠಿ, ಬಾಚಿನಾಡಂಡ ಗಿರಿ, ಹಂಚೇಟಿರ ಮನು, ಮುದ್ದಂಡ ಮಧು, ಮೇದೂರ ದೇವಯ್ಯ, ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net