ನಗರಸಭೆಯಿಂದ ಗ್ರಾಮಗಳನ್ನು ಕೈಬಿಡಲು ಆಗ್ರಹ

ಮದ್ದೂರು ತಾಲೂಕಿನ ಚಾಮನಹಳ್ಳಿ, ಗೊರವನಹಳ್ಳಿ, ಗೆಜ್ಜಲಗೆರೆ ಹಾಗೂ ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಮದ್ದೂರು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಮುಖಂಡರು ಸಭೆ ನಡೆಸಿದರು. ಗೊರವನಹಳ್ಳಿ ಪ್ರಸನ್ನ, ಜಿ.ಸಿ.ಮಹೇಂದ್ರ, ಅಂದಾನಿ, ಸಿದ್ದರಾಜು, ಲಿಂಗಪ್ಪಾಜಿ, ಜಿ.ಎ.ಶಂಕರ್ ಇತರರು ಇದ್ದರು.
ಮದ್ದೂರು ತಾಲೂಕಿನ ಚಾಮನಹಳ್ಳಿ, ಗೊರವನಹಳ್ಳಿ, ಗೆಜ್ಜಲಗೆರೆ ಹಾಗೂ ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಮದ್ದೂರು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಮುಖಂಡರು ಸಭೆ ನಡೆಸಿದರು. ಗೊರವನಹಳ್ಳಿ ಪ್ರಸನ್ನ, ಜಿ.ಸಿ.ಮಹೇಂದ್ರ, ಅಂದಾನಿ, ಸಿದ್ದರಾಜು, ಲಿಂಗಪ್ಪಾಜಿ, ಜಿ.ಎ.ಶಂಕರ್ ಇತರರು ಇದ್ದರು.
Published on

ಮದ್ದೂರು: ತಾಲೂಕಿನ ಚಾಮನಹಳ್ಳಿ, ಗೊರವನಹಳ್ಳಿ, ಗೆಜ್ಜಲಗೆರೆ ಹಾಗೂ ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಮದ್ದೂರು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಗೆಜ್ಜಲಗೆರೆ, ಗೊರವನಹಳ್ಳಿ, ಸೋಮನಹಳ್ಳಿ ಹಾಗೂ ಚಾಮನಹಳ್ಳಿ ಗ್ರಾಪಂ ಉಳಿವು ಹೋರಾಟ ಸಮಿತಿಯಿಂದ ಈ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ ಯಾವುದೇ ಕಾರಣಕ್ಕೂ ನಗರಸಭೆಯನ್ನಾಗಿಸಲು ಮುಂದಾಗದಂತೆ ಪ್ರತಿಭಟನೆ ಕೈಗೊಂಡು ಶಾಸಕ ಕೆ.ಎಂ.ಉದಯ್, ನಗರಾಭಿವೃದ್ಧಿ ಸಚಿವ ಮತ್ತು ಪೌರಾಡಳಿತ ನಿರ್ದೇಶನಾಲಯ ಹಾಗೂ ಮುಖ್ಯಮಂತ್ರಿಗಳಿಗೆ ಆಕ್ಷೇಪಣಾ ಪತ್ರ ಸಲ್ಲಿಸಲು ತೀರ್ಮಾನ ಕೈಗೊಂಡರು.

ನಾಲ್ಕು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿದ ಸ್ಥಳೀಯ ನಿವಾಸಿಗಳು ನಗರಸಭೆಯನ್ನಾಗಿಸಿದರೆ ಹಲವು ಸಮಸ್ಯೆಗಳು ತಲೆದೋರಲಿದ್ದು ಮತ್ತು ನರೇಗಾ ಯೋಜನೆಯು ವಂಚಿತವಾಗಿ ಗ್ರಾಮಗಳ ಅಭಿವೃದ್ಧಿಯು ಕುಂಠಿತವಾಗಲಿದೆ. ಜತೆಗೆ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ಸೌಲಭ್ಯವೂ ರದ್ದಾಗಲಿದೆ ಎಂದರು.

ಮುಖಂಡ ಗೊರವನಹಳ್ಳಿ ಪ್ರಸನ್ನ ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬರುತ್ತಿದ್ದ ಸಹಾಯಧನ ಹಾಗೂ ಅನುದಾನ ಇಲ್ಲದಂತಾಗಲಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ನೀರಾವರಿ ಕೃಷಿ ಪ್ರದೇಶವಿದ್ದು ಇದರಲ್ಲಿ ಭತ್ತ, ರಾಗಿ, ತೆಂಗು, ಕಬ್ಬು ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೃಷಿ ಭೂಮಿಯನ್ನೇ ಅವಲಂಬಿಸಿರುವ ರೈತರಿಗೆ ಹಲವು ಯೋಜನೆಗಳು ಕೈಗೆ ಸಿಗದಂತಾಗಲಿವೆ ಎಂದು ಹೇಳಿದರು.

ಗ್ರಾಪಂಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವ ಜತೆಗೆ ಹಲವು ಗ್ರಾಮಗಳಲ್ಲಿ ಅಧಿಕ ತೆರಿಗೆ ಸಂಗ್ರಹವಾಗಿ ಗ್ರಾಮದ ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲು ಸಹಕಾರಿಯಾಗಲಿದ್ದು, ಸ್ಥಳೀಯ ಗ್ರಾಪಂಗಳಲ್ಲೇ ಸಾರ್ವಜನಿಕರ ಹತ್ತು ಹಲವು ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ನಗರಸಭೆಗೆ ಸೇರ್ಪಡೆಯಾದರೆ ಪ್ರತಿಯೊಂದ ಕಾರ್ಯಕ್ಕೂ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಬೃಹತ್ ಪ್ರತಿಭಟನೆ: ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಗ್ರಾಮಗಳನ್ನು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ಜೂ.30ರಂದು ಸಾವಿರಾರು ಸಾರ್ವಜನಿಕರೊಂದಿಗೆ ಬೃಹತ್ ಪ್ರತಿಭಟನೆ ಆಯೋಜಿಸಿರುವುದಾಗಿ ದಲಿತ ಮುಖಂಡ ಸೋಮನಹಳ್ಳಿ ಅಂದಾನಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸುವುದಾಗಿ ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಸಿ.ಮಹೇಂದ್ರ, ವಿವಿಧ ಗ್ರಾಮಗಳ ಮುಖಂಡರಾದ ಸಿದ್ದರಾಜು, ಸತೀಶ್, ಲಿಂಗಪ್ಪಾಜಿ, ಜಿ.ಎ.ಶಂಕರ್, ಚಾಮನಹಳ್ಳಿ ರಾಮಯ್ಯ, ಮುನೀಶ್, ಪುರುಷೋತ್ತಮ, ವೈ.ಕೆ.ರಾಮಯ್ಯ, ಕೃಷ್ಣ, ರಾಮಣ್ಣ, ಸುನೀಲ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net