

ಮಂಡ್ಯ: ಕೃಷ್ಣರಾಜಸಾಗರದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸುವ ಸಂಬಂಧ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ 24 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ರೈತರ ಜತೆ ಸಭೆ ಮಾಡಿರುವುದನ್ನು ಪ್ರಬಲವಾಗಿ ವಿರೋಧಿಸಲಾಗುವುದು. ಈಗಾಗಲೇ ಯೋಜನೆಯನ್ನು ವಿರೋಧಿಸಿದ್ದೇವೆ. ಅಲ್ಲದೆ ಪಾರ್ಕ್ ನಿರ್ಮಾಣದಿಂದ ಅಣೆಕಟ್ಟೆ, ಪರಿಸರ, ರೈತರು ಅಲ್ಲದೆ ಅಣೆಕಟ್ಟಿನ ವ್ಯಾಪ್ತಿ ಗ್ರಾಮಗಳಿಗೆ ಧಕ್ಕೆಯಾಗುವುದರ ಜತೆಗೆ ಕೃಷಿ ಬದುಕು ಹಾಳಾಗಲಿದೆ ಎಂದರು.
ಯೋಜನೆಯಿಂದ ಕೆಆರ್‌ಎಸ್ ಪ್ರದೇಶದಲ್ಲಿ ಕೆಟ್ಟ ಪರಿಣಾಮ ಬೀರಲಿದೆ. ಅದೇ ರೀತಿ ಶತಮಾನದ ಅಣೆಕಟ್ಟೆ ಭದ್ರತೆಗೆ ನೇರ ಪರಿಣಾಮವಾಗಲಿದೆ. ಕೃಷಿ ಬದುಕು ನಾಶದ ಜತೆಗೆಪ್ರವಾಸೋದ್ಯಮದ ಹೆಸರಿನಲ್ಲಿ ಅನೇಕ ಕೆಟ್ಟ ಪರಿಣಾಮಗಳು ಉಂಟಾಗಲಿದೆ. ಜಲಾಶಯದ ಬಳಿ ಯಾವುದೇ ದಟ್ಟಣೆಯ ಸಾರ್ವಜನಿಕ ಚಟುವಟಿಕೆ ನಡೆಯಬಾರದು. ಆದ್ದರಿಂದ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿದರು. ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ರೋಹಿಣಿ ಮನವಿ ಸ್ವೀಕರಿಸಿದರು.
ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮಹಾಂತಪ್ಪ, ರಂಗಣ್ಣ ಇತರರಿದ್ದರು.