

ವಿಜಯವಾಣಿ ಸುದ್ದಿಜಾಲ ಧಾರವಾಡ
ಆರ್ಎಂಎಸ್ ವಿಂಗಡಣೆ ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರ ಮಾಡುತ್ತಿರುವುದು ಖಂಡನೀಯ. ಹುಬ್ಬಳ್ಳಿಗೆ ಸ್ಥಳಾಂತರ ಮಾಡುವುದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಲಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕಚೇರಿ ಸ್ಥಳಾಂತರ ಕೈ ಬಿಡಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 2007ರಲ್ಲಿ ಕಚೇರಿ ಸ್ಥಳಾಂತರಕ್ಕೆ ಆದೇಶಿಸಲಾಗಿತ್ತು. ಜನರ ಹೋರಾಟ ಹಾಗೂ ಸಂಸದರ ಒತ್ತಾಯದಿಂದ ಆದೇಶ ಹಿಂಪಡೆಯಲಾಗಿತ್ತು. ಆದರೂ ಸ್ಪೀಡ್ ಹಾಗೂ ಪಾರ್ಸೆಲ್ ಕೇಂದ್ರವನ್ನು ಹುಬ್ಬಳ್ಳಿಗೆ ವರ್ಗಾಯಿಸಲಾಗಿದೆ. ಅವುಗಳನ್ನು ಧಾರವಾಡದಲ್ಲಿ ಪುನಃ ಸ್ಥಾಪಿಸುವುದರ ಜತೆಗೆ ಧಾರವಾಡದ ಆರ್ಎಂಎಸ್ ವಿಂಗಡಣೆ ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸುವ ನಿರ್ಧಾರ ಕೈ ಬಿಡಬೇಕು ಎಂದರು.
ಹುಬ್ಬಳ್ಳಿಯಲ್ಲಿ ಸ್ಪೀಡ್ ಮತ್ತು ಪಾರ್ಸೆಲ್ ಸೇವೆಗಳ ಕೇಂದ್ರೀಕೃತ ವಿಂಗಡಣೆ ದೃಷ್ಟಿಯಿಂದ ಈಗ ಧಾರವಾಡದ ಗ್ರಾಹಕರು ವಿಳಂಬದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಧಾರವಾಡ ಜಿಲ್ಲಾ ಕೇಂದ್ರವಾಗಿದೆ. ಎಲ್ಲ ರಾಜ್ಯ ಸರ್ಕಾರಗಳು ಮೂಲ ಕಚೇರಿಗಳಲ್ಲಿ ಮತ್ತು ಕೆಲವು ಉತ್ತರ ಕರ್ನಾಟಕದ ಮುಖ್ಯ ಕಚೇರಿಗಳು ಇಲ್ಲಿ ಸ್ಥಾಪನೆಯಾಗಿವೆ. ಜಿಲ್ಲಾ ಸ್ಥಳವಾಗಿರುವುದರಿಂದ 3-4 ವಿಶ್ವ ವಿದ್ಯಾನಿಲಯಗಳು, ಐಐಟಿ, ಹೈಕೋರ್ಟ್, ಶಿಕ್ಷಣ ಸಂಸ್ಥೆಗಳು ಅಂಚೆ ಕಚೇರಿಯನ್ನು ತಮ್ಮ ನಿಯಮಿತ ಸಂವಹನಕ್ಕಾಗಿ ಬಳಸುತ್ತಿವೆ. ಆದರೆ ವಿಳಂಬ ಕಾರಣಕ್ಕೆ ಗ್ರಾಹಕರು ಇತರ ಖಾಸಗಿ ಸಂವಹನ ವಿಧಾನಗಳತ್ತ ಹೋಗುವುದು ಅನಿವಾರ್ಯವಾಗುತ್ತದೆ ಎಂದರು.
ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕೇಂದ್ರ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಚೇರಿ ಸ್ಥಳಾಂತರ ತಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸತೀಶ ತುರಮರಿ, ಶಂಕರ ಕುಂಬಿ, ವೀರಣ್ಣ ಒಡ್ಡೀನ, ಶಿವಾನಂದ ಭಾವಿಕಟ್ಟಿ, ಇತರರು ಇದ್ದರು.